ಮಡಿಕೇರಿ ಜು.11 : ಕಾಡಾನೆ ಹಾವಳಿ ಹಾಗೂ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ, ನರಿಯಂದಡ ಗ್ರಾಮ ಪಂಚಾಯ್ತಿ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ, ಮರಂದೋಡ, ಕಕ್ಕಬೆ ಗ್ರಾಮಸ್ಥರು ಚೆಯ್ಯಂಡಾಣೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಾಪೋಕ್ಲು-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿವೆ. ಸುಮಾರು 70ರಿಂದ 80ಕ್ಕೂ ಹೆಚ್ಚು ಕಾಡಾನೆಗಳು ಈ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗೂ ನಿರಂತರ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅರಣ್ಯ ಇಲಾಖೆ ಹಾಗು ಚೆಸ್ಕಾಂ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ರಸ್ತೆ ತಡೆ ನಡೆಸಲು ಗ್ರಾಮಸ್ಥರು ಮುಂದಾದ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರು ಸ್ಥಳಕ್ಕೆ ಆಗಮಿಸಿ, ರಸ್ತೆ ತಡೆ ನಡೆಸದಂತೆ ಗ್ರಾಮಸ್ಥರ ಮನವೊಲಿಸಿದ ಹಿನ್ನೆಲೆಯಲ್ಲಿ ರಸ್ತೆ ತಡೆಯನ್ನು ಕೈಬಿಡಲಾಯಿತು. ಆದರೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕಳೆದ ವರ್ಷ ಇದೆ ಜಾಗದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಕೂಡಲೇ ಆನೆಗಳನ್ನು ಹಿಡಿಯುವ ಆಶ್ವಾಸನೆ ನೀಡಿ ತೆರಳಿದ ಅರಣ್ಯಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 15 ದಿನಗಳ ಒಳಗೆ ಕಾಡಾನೆಗಳನ್ನು ಸೆರೆಹಿಡಿಯುವಂತೆ ಗಡುವು ನೀಡಿದರಲ್ಲದೇ, ಸ್ಪಂದನೆ ದೊರೆಯದಿದ್ದಲ್ಲಿ ಉಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.
ನರಿಯಂದಡ ಗ್ರಾಮಸ್ಥ ಪೊಕ್ಕುಳಂಡ್ರ ದನೋಜ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಆನೆಗಳು ತೋಟಗಳಲ್ಲಿ ದಾಂದಲೆ ನಡೆಸುತ್ತಿವೆ. ಆನೆಗಳ ನಿಯಂತ್ರಣಕ್ಕೆ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರು ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.
ಕೊಕೇರಿ ಗ್ರಾಮಸ್ಥರಾದ ಮಚ್ಚಂಡ ಸುಮತಿ, ಕಕ್ಕಬೆ ಯುವಕಪಾಡಿ ಗ್ರಾಮಸ್ಥ ಅಂಜಪರವಂಡ ಕುಶಾಲಪ್ಪ, ನರಿಯಂದಡ ಗ್ರಾಮದ ಬಟ್ಟಿಯಂಡ ಜಯರಾಂ, ಅಶೋಕ್, ಚೇಲಾವರದ ತಮ್ಮಯ್ಯ ಮತ್ತಿತರರು ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ಡಿ.ಎಫ್.ಒ ಜಗನ್ನಾಥ್ ಭೇಟಿ ನೀಡಿ ಈ ವ್ಯಾಪ್ತಿಯಲ್ಲಿರುವ 5 ಕಾಡಾನೆಗಳನ್ನು ಸೆರೆ ಹಿಡಿಯಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳಿರ ದೇವಯ್ಯ ಮಾತನಾಡಿ, ಇಲ್ಲಿರುವ ಆನೆಗಳ ನಿಯಂತ್ರಣಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗ 5 ಆನೆಗಳನ್ನು ಸೆರೆ ಹಿಡಿಯಲು ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಕಾರ್ಯಾಚರಣೆ ನಡೆಸುತ್ತೇವೆ. ಎಂದು ಹೇಳಿದರು. ಮೂರ್ನಾಡು ಚೆಸ್ಕಾಂ ಅಧಿಕಾರಿ ಸಂಪತ್ ಮಾತನಾಡಿ, ವಿದ್ಯುತ್ ಸಮಸ್ಯೆ ಕುರಿತು ಕೂಡಲೇ ಕ್ರಮ ಕೈಗೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ 7 ಗ್ರಾಮಕ್ಕೆ ಒಳಪಟ್ಟ ಗ್ರಾಮಸ್ಥರು, 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸದಸ್ಯರು, ಪಾಲ್ಗೊಂಡಿದ್ದರು. ವಿರಾಜಪೇಟೆ ಅರಣ್ಯಧಿಕಾರಿ ಎಸಿಎಫ್ ನೆಹರು, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಚೆಸ್ಕಾಂ ಜೆ.ಇ. ಚಿತ್ರೇಶ್, ಮತ್ತಿತರರು ಸ್ಥಳದಲ್ಲಿ ಹಾಜರಿದ್ದರು.
Breaking News
- *ಮಡಿಕೇರಿಯ ಎಸ್ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*
- *ಮಡಿಕೇರಿಯ ಹಿಂದೂಸ್ತಾನಿ ಶಾಲೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ದೇಶದ ಭವ್ಯ ಭವಿಷ್ಯ ಕಂಡ ನೆಹರು*
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*