ನಾಪೋಕ್ಲು ಜು.17 NEWS DESK : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ನಾಪೋಕ್ಲುವಿನ ವಿವಿಧ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ಹಾನಿಯಾಗಿದೆ.
ನಾಪೋಕ್ಲುವಿನ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದ್ದು, ನಿರಂತರ ಮಳೆಯಿಂದ ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ. ಚೆರಿಯಪರಂಬುವಿನಲ್ಲಿ ನದಿ ತಟದ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ನೋಟಿಸು ಜಾರಿ ಮಾಡಲಾಗಿದ್ದು ಹಲವರು ಮನೆ ಖಾಲಿ ಮಾಡಿದ್ದಾರೆ. ಇನ್ನುಳಿದಂತೆ ಹಲವರ ಮನೆ ಜಲಾವೃತವಾಗುವ ಸಾಧ್ಯತೆಗಳಿವೆ. ಕೊಟ್ಟ ಮುಡಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿದೆ .
ಗಾಳಿ ಮಳೆಗೆ ಚೇಲಾವರ ಗ್ರಾಮದ ಮುತ್ತಪ್ಪ ಎಂಬವರ ವಾಸದ ಮನೆಯ ಹೆಂಚುಗಳು ಹಾನಿಯಾಗಿದೆ. ಕುಂಜಿಲ ಗ್ರಾಮದ ಮುದ್ದಪ್ಪ, ಕುಂಜಿಲ ಗ್ರಾಮದ ಮಾಯಮ್ಮ ಹಾಗೂ ಎಮ್ಮೆಮಾಡು ಗ್ರಾಮದ ಹುಸೇನ್ನರ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಕೋಣಂಜಗೆರಿ ಗ್ರಾಮದ ಕುಶಾಲಪ್ಪ ಎಂಬವರ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಬಿರುಸಿನ ಮಳೆಯೂ ಅದರೊಂದಿಗೆ ಬೀಸುತ್ತಿರುವ ಗಾಳಿಯೂ ಗ್ರಾಮೀಣ ಜನರಿಗೆ ಕಷ್ಟ ನಷ್ಟಗಳು ಸಂಭವಿಸಿದ್ದು ಹೈರಾಣಾಗಿಸಿದೆ. ಸ್ಥಳಕ್ಕೆನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ವರದಿ : ದುಗ್ಗಳ ಸದಾನಂದ.