ಮಡಿಕೇರಿ ಜು.17 NEWS DESK : ಜಿಲ್ಲೆಯ ಮೂಲನಿವಾಸಿಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ಭಾಗಮಂಡಲ-ತಲಕಾವೇರಿಯಲ್ಲಿ ಕರ ವಸೂಲಿಯ ನೆಪದಲ್ಲಿ ವಾಹನಗಳನ್ನು ತಡೆದು ಟೋಲ್ ಶುಲ್ಕ ಎಂಬಂತೆ ಹಣ ವಸೂಲಿ ಮಾಡುತ್ತಿದ್ದು, ತಕ್ಷಣವೇ ಇದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಮೂಲ ನಿವಾಸಿಗಳನ್ನು ಒಂದುಗೂಡಿಸಿ ಹೋರಾಟ ನಡೆಸಲಾಗುವುದೆಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಸೇರಿದಂತೆ ಆರಾಧಿಸುತ್ತಿರುವ ಜಿಲ್ಲೆಯ ಇತರ ಮೂಲನಿವಾಸಿಗಳಿಗೆ ತಮ್ಮದೇಯಾದ ಆಚಾರ-ವಿಚಾರ, ಧಾರ್ಮಿಕ ಆಚರಣೆಗಳಿದ್ದು, ಇತರ ಜಿಲ್ಲೆಗಳನ್ನು ತೆಗೆದುಕೊಂಡರೆ ಇದು ವಿಭಿನ್ನ ಹಾಗೂ ವಿಶೇಷ ಎನ್ನಬಹುದು. ನಾವು ಭಾಗಮಂಡಲ ತಲಕಾವೇರಿಗೆ ಹಿರಿಯರು ನಮಗಾಗಿ ಬಿಟ್ಟು ಹೋಗಿರುವ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲು ಹಾಗೂ ಅಗಲಿದ ನಮ್ಮ ಪೂರ್ವಿಕರಿಗೆ ಮೋಕ್ಷವನ್ನು ಬಯಸಿ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಹೊರತು ಮೋಜು ಮಸ್ತಿಗಾಗಿ ಬರುವವರಲ್ಲ ಎನ್ನುವುದನ್ನು ಸ್ಥಳೀಯ ಪಂಚಾಯತ್ ಅಥವಾ ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಹುಟ್ಟಿನಿಂದ ಸಾವಿನವರೆಗೂ ಆರಾಧಿಸಿಕೊಂಡು, ವಿವಿಧ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಹುಟ್ಟಿದ ಮಗುವಿನ ತಲೆ ಮುಡಿ ಹರಕೆಯಿಂದ ಹಿಡಿದು ಸತ್ತವರ ಹೆಸರಿನಲ್ಲಿ ಕಿರಿಯರು ತಲೆ ಮುಡಿ ಹರಕೆ ಕೊಟ್ಟು ಪಿಂಡ ಪ್ರಧಾನ ಮಾಡಿ ಅಗಲಿದ ಆತ್ಮಗಳಿಗೆ ಮೋಕ್ಷವನ್ನು ಕೋರುತ್ತಾರೆ. ಹೀಗಿರುವಾಗ ತಮ್ಮದೆಯಾದ ನೆಲದಲ್ಲಿ ತನ್ನ ಹೆತ್ತ ತಾಯಿಯನ್ನು ನೋಡಲು ಹಣಕೊಟ್ಟು ಹೋಗುವ ದೌರ್ಭಾಗ್ಯ ಬಂದಿರುವುದು ದುರಾದೃಷ್ಟಕರ ಎಂದರು.
ಪ್ರವಾಸಿಗರಿಂದ ಟೋಲ್ ಶುಲ್ಕ ಅಥವಾ ವಾಹನ ಶುಲ್ಕ ಅಥವಾ ಬೇರೆ ಯಾವ ಶುಲ್ಕ ಬೇಕಾದರೆ ವಸೂಲಿ ಮಾಡಲಿ ಅದಕ್ಕೆ ನಮ್ಮದು ಅಭ್ಯಾಂತರವಿಲ್ಲ. ಆದರೆ ನಿಜವಾದ ಕಾವೇರಿ ಭಕ್ತರಿಗೆ ಅದರಲ್ಲೂ ಮೂಲನಿವಾಸಿಗಳಿಗೆ ಯಾವುದೇ ಶುಲ್ಕವನ್ನು ವಸೂಲಿ ಮಾಡಕೂಡದ್ದು ಎಂಬ ಆದೇಶವನ್ನು ಹೊರಡಿಸಬೇಕಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಟೋಲ್’ಗಳಲ್ಲಿಯೇ ಸ್ಥಳೀಯರಿಂದ ಸುಂಕ ವಸೂಲಿ ಮಾಡುವುದಿಲ್ಲ ಹೀಗಿರುವಾಗ ನಮ್ಮದೆ ನೆಲದಲ್ಲಿ ನಾವು ಅನ್ಯರಂತೆ ಬದುಕು ಸಾಗಿಸುವುದು ಸರಿಯಲ್ಲ. ಶಾಸಕರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ ಚಮ್ಮಟೀರ ಪ್ರವೀಣ್, ಸ್ಥಳೀಯರಿಗೆ ವಾಹನ ಶುಲ್ಕವಾಗಲಿ, ಇನ್ನಿತರ ಯಾವುದೇ ಶುಲ್ಕವನ್ನು ವಿಧಿಸದೆ ಕಾವೇರಿ ಮಾತೆಯ ದರ್ಶನಕ್ಕೆ ಮುಕ್ತ ವಾತಾವರಣ ಕಲ್ಪಿಸಬೇಕು ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಿಂಡ ಪ್ರದಾನ ಮಾಡುವ ಭಕ್ತರ, ಮೂಲ ನಿವಾಸಿಗಳ ವಾಹನಗಳನ್ನು ತಲಕಾವೇರಿ ಮುಖ್ಯ ದ್ವಾರದ ಕೆಳಗೆ ನಿಲ್ಲಿಸದೆ ಕಾವೇರಿ ಕುಂಡಿಕೆಯ ಬಳಿ ವಾಹನ ನಿಲುಗಡೆ ಸ್ಥಳಕ್ಕೆ ಬಿಡುವಂತಾಗಬೇಕು. ಪ್ರವಾಸಿಗರ ವಾಹನಗಳಿಗೆ ಕೆಳಗೆ ನಿಲ್ಲಲ್ಲು ಅವಕಾಶ ಮಾಡಿಕೊಟ್ಟು ಪಿಂಡ ಪ್ರದಾನ ಮಾಡಿದ ಸ್ಥಳೀಯರ ವಾಹನಗಳನ್ನು ಗೇಟಿನ ಒಳಗೆ ಬಿಡುವಂತಾಗಬೇಕು. ತಲಕಾವೇರಿ ಭಾಗಮಂಡಲದಲ್ಲಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದೇವರ ದರ್ಶನ ಹಾಗೂ ಪೂಜೆ ಪುನಸ್ಕಾರಗಳಲ್ಲಿ ಪಿಂಡ ಪ್ರಧಾನ ಮಾಡಿದವರಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.