ಸುಂಟಿಕೊಪ್ಪ ಜು.25 NEWS DESK : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ತೋಟಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಕೃಷಿ ಫಸಲನ್ನು ತಿಂದು ತೇಗುತ್ತಿರುವ ಕಾಡಾನೆಗಳಿಂದ ಜೀವಭಯವಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಿವಾಸಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬುವವರ ತೋಟಕ್ಕೆ ಪ್ರತಿದಿನ ಬರುತ್ತಿರುವ ಕಾಡಾನೆ ತೆಂಗು ಮತ್ತು ಕಾಫಿ ಗಿಡಗಳನ್ನು ನಾಶ ಮಾಡಿದೆ. ಮನೆಯ ಸಮೀಪವೂ ಸುಳಿದಾಡುವ ಕಾಡಾನೆಗಳಿಂದ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾನ್ ಬೈಲ್ ಬೈಚನಹಳ್ಳಿಯ ನೆಟ್ಲಿ ‘ಬಿ’ ತೋಟದಲ್ಲಿ ಹಗಲು ವೇಳೆಯಲ್ಲೇ ಕಾಫಿ ಗಿಡಗಳ ಮಧ್ಯೆ ಕಾಡಾನೆ ನಿಂತಿರುವ ದೃಶ್ಯವನ್ನು ಕಾರ್ಮಿಕರು ಗಮನಿಸಿದ ಹಿನ್ನೆಲೆ ಉಳಿದ ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಸಮೀಪದ ಕೆಳಪನ್ಯ ತೋಟದಲ್ಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ವಿಷಯವರಿತ ತೋಟದ ಮಾಲೀಕರು ಕೆಲಸದಿಂದ ವಾಪಾಸ್ಸಾಗುವಂತೆ ಕಾರ್ಮಿಕರಿಗೆ ತಿಳಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಹೋಬಳಿ ತುಂಬಾ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಹೆದ್ದಾರಿಯಲ್ಲೂ ಸಂಚರಿಸುತ್ತಿವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಅನಾಹುತ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.