ಸೋಮವಾರಪೇಟೆ ಜು.25 NEWS DESK : ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಸಹಿತ ವರುಣ ಅರ್ಭಟಿಸುತ್ತಿದ್ದು, ಹಾನಿ ಪ್ರಮಾಣ ಹೆಚ್ಚಾಗುತ್ತಿದೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ರಾಜ್ಯ ಹೆದ್ದಾರಿಯ ಯಡೂರು ಗ್ರಾಮದ ಸಮೀಪ ಬರೆ ಕುಸಿದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಗುರುವಾರ ಬೆಳಗ್ಗಿನ ಜಾವ ಬರೆ ಕುಸಿದಿದ್ದು, ರಸ್ತೆಯಲ್ಲಿ ಮಣ್ಣು ಸಂಗ್ರಹವಾಗಿದೆ. ಯಂತ್ರಗಳ ಮೂಲಕ ಮಣ್ಣನ್ನು ಸಾಗಾಟ ಮಾಡಿದರೂ, ಮಣ್ಣು ಜರಿದು ರಸ್ತೆಗೆ ಬರುತ್ತಿದೆ. ಆ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಗೌಡಳ್ಳಿಯ ಗ್ರಾಮ ಪಂಚಾಯಿತಿ ಶುಂಠಿ ಗ್ರಾಮದ ಸಂಜಯ್ ಎಂಬ ಅಡಕೆ ತೋಟ ಜಲಾವೃತಗೊಂಡಿದ್ದು, ನಷ್ಟದ ಭೀತಿ ಎದುರಾಗಿದೆ. ಕಲ್ಕಂದೂರು ಗ್ರಾಮದ ಪ್ರವೀಣ್ ಎಂಬವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಬಿಳಿಗೇರಿ ಗ್ರಾಮದಲ್ಲಿ ಟ್ರಾನ್ಸ್ಫರ‍್ಮರ್ ಮುರಿದು ಬಿದ್ದಿದ್ದು ಇಡೀ ಗ್ರಾಮಕ್ಕೆ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 218.0ಮಿಲಿ ಮೀಟರ್ ಮಳೆಯಾಗಿದೆ. ಕೊಡ್ಲಿಪೇಟೆ 105.4, ಸೋಮವಾರಪೇಟೆ 110.8, ಶನಿವಾರಸಂತೆಗೆ 86.ಮಿ.ಮೀ.ಮಳೆಯಾಗಿದೆ.