ಮಡಿಕೇರಿ ಜು.31 NEWS DESK : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ (2024-25) ಸಹ ರೈತ/ ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
ನೋಂದಣಿ ಶುಲ್ಕ: 2024-25ನೇ ಸಾಲಿನಿಂದ ಅನ್ವಯಿಸುವಂತೆ ಕೃಷಿ ಪ್ರಶಸ್ತಿಗೆ ನಿಗದಿ ಪಡಿಸಲಾಗಿರುವ ಪ್ರವೇಶ ಶುಲ್ಕವನ್ನು ರದ್ದುಪಡಿಸಲಾಗಿದೆ.
ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧಾ ಬೆಳೆ ಬೆಳೆದಿರಬೇಕು. ಸ್ವಂತ ಜಮೀನು ಇರುವ ಬಗ್ಗೆ ಪಹಣಿ ಪತ್ರ ಹೊಂದಿರಬೇಕು. ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತ/ ರೈತ ಕುಟುಂಬದವರು ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಮೇಲಿನ ಹಂತದ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.
ತಾಲ್ಲೂಕು ಮಟ್ಟದಲ್ಲಿ ಬಹುಮಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದವರು ರಾಜ್ಯ ಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ. ಆದರೆ ಕೆಳ ಹಂತದ ಸ್ಪರ್ಧೆಗೆ ಸ್ಪರ್ಧಿಸುವಂತಿಲ್ಲ. ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬ0ಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕವನ್ನು ತಿಳಿಸತಕ್ಕದ್ದು.
ಬಹುಮಾನದ ಮೊತ್ತ: ತಾಲ್ಲೂಕು ಮಟ್ಟ ರೂ.15 ಸಾವಿರ(ಪ್ರಥಮ), ರೂ.10 ಸಾವಿರ(ದ್ವಿತೀಯ), ರೂ.5 ಸಾವಿರ(ತೃತೀಯ) ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ರೂ.30 ಸಾವಿರ(ಪ್ರಥಮ), ರೂ.25 ಸಾವಿರ(ದ್ವಿತೀಯ), ರೂ.20 ಸಾವಿರ(ತೃತೀಯ) ಬಹುಮಾನ ನೀಡಲಾಗುವುದು. ಹಾಗೆಯೇ ರಾಜ್ಯಮಟ್ಟದಲ್ಲಿ ರೂ.50 ಸಾವಿರ(ಪ್ರಥಮ), ರೂ.40 ಸಾವಿರ(ದ್ವಿತೀಯ) ಮತ್ತು ರೂ.35 ಸಾವಿರ(ತೃತೀಯ) ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರೈತ/ ರೈತ ಮಹಿಳೆಯರು ಸಂಬ0ಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಕಂದಾಯ ಇಲಾಖೆಯಿಂದ ಪಡೆದ ಪಹಣಿ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ನಂತರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.