ಮಡಿಕೇರಿ NEWS DESK ಜು.31 : ಹವಾಮಾನ ವೈಪರಿತ್ಯದಿಂದ ಅತಿವೃಷ್ಟಿ ಉಂಟಾಗಿದ್ದು, ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಆಗಸ್ಟ್ ತಿಂಗಳಲ್ಲಿಯೂ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿವಿಲ್ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿದ್ದಾರೆ. ಅತ್ತೂರು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಹ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಸರ್ಕಾರ ಜಿಲ್ಲಾಡಳಿತದ ಜೊತೆ ಸದಾ ಸ್ಪಂದಿಸಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ರಸ್ತೆ, ವಿದ್ಯುತ್ ಪರಿವರ್ತಕ ಮತ್ತು ಕಂಬಗಳು, ಬೆಳೆ ಹಾನಿ ಸೇರಿದಂತೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಎಸ್‌ಐ ತಾಂತ್ರಿಕ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದ್ದು, ಗುಡ್ಡು ಕುಸಿಯುವ ಪ್ರದೇಶಗಳಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕಂದಾಯ ಸಚಿವರು ವಿವರಿಸಿದರು. ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿಯುವುದನ್ನು ತಡೆಯುವ ಅಗತ್ಯ ಮುನ್ನೆಚ್ಚರ ಕ್ರಮಗಳನ್ನು ಕೈಗೊಳ್ಳಲು 300 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದು, ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಕಂದಾಯ ಸಚಿವರು ತಿಳಿಸಿದರು. ಮುಂಗಾರು ಸಂದರ್ಭದಲ್ಲಿ ರಾಜ್ಯದಲ್ಲಿ ವಿವಿಧ ರೀತಿಯ ರಸ್ತೆ, ವಿದ್ಯುತ್, ಮನೆ, ಗುಡ್ಡ ಕುಸಿತ, ಹೀಗೆ ಹಲವು ರೀತಿಯ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಭೂಕುಸಿತ ಹಾಗೂ ಪ್ರವಾಹ ಪೀಡಿತ ಜನರು ಸ್ವಯಂ ಪ್ರೇರಣೆಯಿಂದ ಸ್ಥಳಾಂತರವಾಗಬೇಕು. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ನಿಷ್ಠುರವಾಗಿ ನಡೆದುಕೊಳ್ಳಬೇಕು ಎಂದು ಇದೇ ಸಂದರ್ಭ ಕೃಷ್ಣಬೈರೇಗೌಡ ಅವರು ತಿಳಿಸಿದರು. ಸರ್ಕಾರಕ್ಕೆ ಪ್ರಾಣ ಉಳಿಸುವುದು ಮುಖ್ಯ. ಪ್ರಾಣ ಹೋದ ನಂತರ ಪರಿಹಾರ ನೀಡುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರು ಸಹ ಬದಲಾಗಬೇಕು ಎಂದು ಹೇಳಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ಶಾಸಕರಾದ ಡಾ.ಮಂತರ್ ಗೌಡ ಅವರು ವಾಲ್ನೂರು ತ್ಯಾಗತ್ತೂರು ಕಾಳಜಿ ಕೇಂದ್ರ, ಹಾರಂಗಿ ಬಳಿಯ ಅತ್ತೂರು, ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶ, ಸಿದ್ದಾಪುರದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರ ಹೀಗೆ ಮಳೆ ಹಾನಿ ಪ್ರದೇಶಗಳಿಗೆ ವೀಕ್ಷಿಸಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಸರ್ಕಾರ ತಮ್ಮ ಜೊತೆಗೆ ಇದೆ. ಆ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಂದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಮಾಹಿತಿ ಪಡೆದರು. ರಸ್ತೆ, ಸೇತುವೆ, ವಿದ್ಯುತ್ ಕಂಬ ಮತ್ತು ಪರಿವರ್ತಕಗಳು, ಬೆಳೆ ಹಾಗೂ ಮನೆ ಹಾನಿ… ಹೀಗೆ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟದ ಬಗ್ಗೆ ಮಾಹಿತಿ ಪಡೆದರು.