ಪಾಟ್ನಾ ಆ.2 NEWS DESK : ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಔರಂಗಾಬಾದ್, ಜೆಹಾನಾಬಾದ್, ಸರನ್, ರೋಹ್ತಾಸ್, ನಳಂದಾ ಮತ್ತು ಜಮುಯಿ ಜಿಲ್ಲೆಗಳಲ್ಲಿ ಸಿಡಿಲು ಬಡಿದು 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿದೆ. ಔರಂಗಾಬಾದ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಗರಿಷ್ಠ ನಾಲ್ವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜೆಹಾನಾಬಾದ್‌ನಲ್ಲಿ, ತಾಂಡ್ವಾ ಪ್ರದೇಶದ ಸರೇನ್ ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಸರನ್‌ನ ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ನರ್ವನ್ ಗ್ರಾಮದಲ್ಲಿ ಬುಧವಾರ ಸಂಜೆ 48 ವರ್ಷದ ವ್ಯಕ್ತಿಯೊಬ್ಬರು ಸಡಿಲು ಬಡಿದು ಸಾವನ್ನಪ್ಪಿದ್ದಾರೆ. ದನ ಮೇಯಿಸಲು ಊರ ಹೊರಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸಿಡಿಲು ಬಡಿದು ರಾಂಪುರ ಕಾಲಾ ಗ್ರಾಮದಲ್ಲಿ 16 ವರ್ಷದ ಬಾಲಕ ಮತ್ತು ಸರನ್‌ನ ಗರ್ಖಾ ಪೊಲೀಸ್ ಠಾಣೆ ವ್ಯಾಪ್ತಿಯ ಕಸಿನಾ ಗ್ರಾಮದ 14 ವರ್ಷದ ಬಾಲಕ ಮೃತಪಟ್ಟಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದು, ನಳಂದಾ ಮತ್ತು ಜಮುಯಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.