ನಾಪೋಕ್ಲು ಆ.2 NEWS DESK : ಪಟ್ಟಣದ ಇಂದಿರಾನಗರದಲ್ಲಿ ಬರೆ ಕುಸಿದಿದ್ದು, ಮೂರು ಮನೆಗಳಿಗೆ ಹಾನಿಯಾಗಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಮಳೆ ಗಾಳಿಯಿಂದಾಗಿ ನಗರದ ನಿವಾಸಿ ಮಂಜುಳಾ, ವಿನಾಯಕ, ರಾಣಿ ಎಂಬವರ ಮನೆಗಳ ಸಮೀಪ ಬರೆ ಕುಸಿತು ಮನೆಗೆ ತೀವ್ರ ಅಪಾಯ ಮಟ್ಟಕ್ಕೆ ತಲುಪಿದ್ದು, ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.
ಈ ಸಂದರ್ಭ ನಿವಾಸಿಗಳು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದು, ಇದುವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಇದೀಗ ಕೆಳಭಾಗದಲ್ಲಿ ಲೇಔಟ್ ಮಾಡಲು ಯಂತ್ರಗಳ ಮುಖಾಂತರ ಚರಂಡಿ ತೆಗೆದಿರುವುದರಿಂದಾಗಿ ಸಮಸ್ಯೆ ಉದ್ಭವಿಸಿದೆ ಎಂದು ಆರೋಪಿಸಿದರು. ಹೆಚ್ಚಿನ ಅನಾಹುತ ಸಂಭವಿಸುವುದರ ಮುನ್ನ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲೂಕು ಬಿಜೆಪಿ ಉಪಾಧ್ಯಕ್ಷ ಮನು ಮಹೇಶ್ ಮಾತನಾಡಿ, ಮೂರು ಮನೆಗಳಿಗೆ ಅಪಾಯ ತಟ್ಟುವ ಭೀತಿ ಇದೆ. ಕಂದಾಯ ಇಲಾಖೆಯ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭ ಕಂಗಂಡ ಜಾಲಿ ಪೂವಪ್ಪ, ಸುಕುಮಾರ್ ಇನ್ನಿತರ ಉಪಸ್ಥಿತರಿದ್ದರು. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು..
ವರದಿ : ದುಗ್ಗಳ ಸದಾನಂದ.