ಮಡಿಕೇರಿ ಆ.3 NEWS DESK : ಕೊಡಗು ಜಿಲ್ಲೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಕಡಿಮೆ ದರಕ್ಕೆ ಗುತ್ತಿಗೆ ನೀಡುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಮಳೆಹಾನಿ ಪ್ರದೇಶ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಿದ ಸಂದರ್ಭ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಯೂನಿಯನ್‍ನ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಜಿಲ್ಲೆಯಲ್ಲಿ ಸುಮಾರು ಆರೂವರೆ ಲಕ್ಷ ಜನಸಂಖ್ಯೆಯಿದ್ದು, ಕಾಫಿ, ಮೆಣಸು, ಅಡಿಕೆ, ರಬ್ಬರ್, ಚಹಾ ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯುವ ಪ್ರದೇಶವಾಗಿದೆ. ಭಾರತ ಕಾಫಿ ಉತ್ಪಾದನೆಯಲ್ಲಿ ಕೊಡಗು ಉತ್ತಮ ಸ್ಥಾನದಲ್ಲಿದೆ. ಆದರೆ ಜಿಲ್ಲೆಯಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರು, ಸಂಘಟಿತ ಮತ್ತು ಅಸಂಘಟಿತ ರಂಗದಲ್ಲಿ ಗುತ್ತಿಗೆ, ಹೊರಗುತ್ತಿಗೆ, ಕಾಂಟ್ರಾಕ್ಟ್ ಪದ್ಧತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ಕುಟುಂಬಗಳಿಗೆ ತಲಾತಲಾಂತರಗಳಿಂದ ಹುಟ್ಟಿನಿಂದಲೂ ಬಾಡಿಗೆ ಮನೆ, ತೋಟದ ಲೈನ್‍ಮನೆ, ಅಪಾಯಕಾರಿಯಾಗಿರುವ ನದಿ ದಡ, ಬೆಟ್ಟಗುಡ್ಡಗಳ ಮೇಲೆ ಮನೆ ನಿರ್ಮಿಸಿಕೊಂಡು ಸಂಕಷ್ಟದ ಬದುಕನ್ನು ನಡೆಸುತ್ತಿರುವ ಆದಿವಾಸಿಗಳು, ದಲಿತ ಸಮುದಾಯ, ಅಲ್ಪಸಂಖ್ಯಾತರು ಹಾಗೂ ಇನ್ನಿತರ ಕುಟುಂಬಗಳು ಸ್ವಂತವಾಗಿ ವಾಸಕ್ಕೆ ಮನೆ ನಿವೇಶನಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದರು. ನೊಂದ ಕುಟುಂಬಗಳಿಗೆ ಶಾಶ್ವತ ಪರಿಹಾರಕ್ಕಾಗಿ ಹತ್ತಾರು ವರ್ಷಗಳಿಂದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಯುವ ಜನ ಸಂಘನೆಗಳು, ಪ್ರಗತಿಪರ ದಲಿತ ಸಂಘಟನೆಗಳು ಜಿಲ್ಲೆಯಲ್ಲಿ ಹೋರಾಟ ನಡೆಸಿ ಶ್ರೀಮಂತರು, ಕಾರ್ಪೋರೇಟ್ ವಲಯಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಬಡವರಿಗೆ ಹಂಚಬೇಕೆಂದು ಹಲವು ಬಾರಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಕ್ಕೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗಿನ ಕಾಂಗ್ರೆಸ್ ಸರಕಾರ ಈ ಹಿಂದಿನ ಬಿಜೆಪಿ ಸರಕಾರ ತೆಗೆದುಕೊಂಡ ನಿರ್ಧಾರದಂತೆ ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ ಜಮೀನನ್ನು ನೀಡಲು ಮುಂದಾಗಿದೆ. ಇದರಿಂದ ಕಡು ಬಡತನದಲ್ಲಿರುವ ಆದಿವಾಸಿ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಂಚನೆಯಾಗಲಿದೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು. ಜನವಿರೋಧಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು, ಸರಕಾರಿ ಒತ್ತುವರಿ ಜಾಗವನ್ನು ತೆರವುಗೊಳಿಸಿ ಜಿಲ್ಲೆಯ ನಿವೇಶನ ರಹಿತರಿಗೆ ನೀಡಬೇಕು, 2018-19ರಲ್ಲಿ ಮಹಾಮಳೆಯಿಂದ ಮನೆ ಕಳೆದುಕೊಂಡಿರುವ ನಿವೇಶನ ರಹಿತ ಕುಟುಂಟಗಳಿಗೆ ನಿವೇಶನ ನೀಡಬೇಕು, ನಿರಾಶ್ರಿತರ ಹೊಸ ಪಟ್ಟಿಯನ್ನು ತಯಾರಿಸಬೇಕು. ವಾಲ್ನೂರು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ 8.5 ಏಕರೆ ಜಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು, ಮನೆ ನಿರ್ಮಿಸಿಕೊಳ್ಳಲು ತಲಾ ರೂ.10 ಲಕ್ಷ ನೀಡಬೇಕು, ನಿವೇಶನ ಹೊಂದಿರುವ ದಾಖಲಾತಿಗಳಿಲ್ಲದ ಸಾವಿರಾರು ಮನೆಗಳಿದ್ದು, 94 ಸಿ ಮೂಲಕ ಹಕ್ಕುಪತ್ರ ವಿತರಣೆಯಾಗದೆ ಇರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಜಿಲ್ಲೆಯಲ್ಲಿ ನಿರಂತರವಾಗಿರುವ ವನ್ಯಜೀವಿ ದಾಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪನ್ ಹಾಗೂ ಪ್ರಮುಖರಾದ ಶೌಕತ್ ಹಾಜರಿದ್ದರು.