ಮಡಿಕೇರಿ NEWS DESK ಆ.3 : ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲೇ ಜಿಲ್ಲಾ ಸಮಿತಿ ಮುಂದುವರಿಯಲಿದೆ. ಮನು ಸೋಮಯ್ಯ ಸೇರಿದಂತೆ ಕೆಲವರನ್ನು ಪದಚ್ಯುತಗೊಳಿಸಿರುವ ರಾಜ್ಯ ಪದಾಧಿಕಾರಿಗಳ ಕ್ರಮ ಖಂಡನೀಯವೆಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ 5 ತಾಲ್ಲೂಕು ರೈತ ಸಂಘಟನೆಗಳು ಮನು ಸೋಮಯ್ಯ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಹೆಸರಿನಲ್ಲಿ ಮುನ್ನಡೆಯಲು ನಿರ್ಣಯ ಕೈಗೊಂಡಿವೆ ಎಂದರು. ಮನು ಸೋಮಯ್ಯ ಅವರ ಬೆಳವಣಿಗೆ ಮತ್ತು ಹೋರಾಟವನ್ನು ಸಹಿಸದೆ ರೈತ ಸಂಘದ ಕೆಲವು ರಾಜ್ಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರ ಸಹಿತ ಕೆಲವು ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಿದ್ದಾರೆ. ರೈತ ಸಂಘದ ರಾಜ್ಯ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರೆಯುವ ಮೂಲಕ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜು.23ರಂದು ಕೊಡಗು ಜಿಲ್ಲೆಯ ಸಮಿತಿಗಳ ಸಭೆ ನಡೆಸಿ ರಾಜ್ಯ ಸಮಿತಿಯ ನಿರ್ಧಾರವನ್ನು ಖಂಡಿಸಲಾಗಿದೆ. ಅಲ್ಲದೆ ಮನು ಸೋಮಯ್ಯ ಅವರ ಮುಂದಾಳತ್ವದಲ್ಲಿ ಜಿಲ್ಲಾ ಸಮಿತಿಯನ್ನು ಪುನರಾಯ್ಕೆ ಮಾಡಲಾಗಿದೆ. ಈ ನಿರ್ಣಯವನ್ನು ರಾಜ್ಯ ಸಂಘಕ್ಕೂ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಲೋಕಸಭಾ ಚುನಾವಣೆ ಸಂದರ್ಭ ರಾಜಕೀಯ ಪಕ್ಷವೊಂದರ ವಿರುದ್ಧ ಭಿತ್ತಿಪತ್ರ ಹಂಚಿಲ್ಲ ಎನ್ನುವ ಕಾರಣ ನೀಡಿ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಸಹಿತ ಪದಾಧಿಕಾರಿಗಳನ್ನು ಪದಚ್ಯುತಿ ಗೊಳಿಸಿರುವುದು ರೈತ ಸಂಘದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ರೈತ ಸಂಘ ರಾಜಕಿಯೇತರ ಸಂಘಟನೆಯಾಗಿದ್ದು, ರೈತರ ಸಮಸ್ಯೆಗಳಿಗೆ ಹೋರಾಟ ಮಾಡಬೇಕು. ಇದೇ ಸಿದ್ಧಾಂತದಂತೆ ಕೊಡಗು ಜಿಲ್ಲಾ ರೈತ ಸಂಘ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು. ಮನು ಸೋಮಯ್ಯ ಅವರ ನೇತೃತ್ವದ ರೈತ ಸಂಘ ಬೆಳೆಗಾರರು, ಕೃಷಿಕರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದೆ. ವನ್ಯಜೀವಿಗಳಿಂದಾಗುವ ಮಾನವ ಜೀವಹಾನಿಗೆ ಸರ್ಕಾರ ಅಲ್ಪಪ್ರಮಾಣದ ಪರಿಹಾರ ನೀಡುತ್ತಿತ್ತು. ಪ್ರಸ್ತುತ ಈ ಮೊತ್ತ 15 ಲಕ್ಷ ರೂ.ಗಳಿಗೆ ಏರಿಕೆಯಾಗಲು ರೈತ ಸಂಘದ ಹೋರಾಟವೇ ಕಾರಣವೆಂದು ಸುಜಯ್ ಅಭಿಪ್ರಾಯಪಟ್ಟರು. ಪ್ರಮುಖರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ ರಾಜ್ಯ ಸಂಘದ ಪದಾಧಿಕಾರಿಗಳ ನಡೆ ಬೇಸರ ತಂದಿದ್ದು, ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಸೋಮವಾರಪೇಟೆ ಸಂಚಾಲಕ ಎ.ಆರ್.ಕುಶಾಲಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹಾಗೂ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಉಪಸ್ಥಿತರಿದ್ದರು.