ಕೇರಳ NEWS DESK ಆ.3 : ವಯನಾಡಿನ ಚೂರಲ್ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಪಾರಾದವರು ಈಗ ಸಂತ್ರಸ್ತರ ಶಿಬಿರದಲ್ಲಿದ್ದಾರೆ. ತಮ್ಮ ಒಡಹುಟ್ಟಿದವರು, ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇವರು ಕಣ್ಣೀರು ಹಾಕುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಆ ರಾತ್ರಿ ಪ್ರಾಣಾಪಾಯದಿಂದ ಪಾರಾದವರಿದ್ದಾರೆ. ಹಾಗೆ ಪಾರಾದ ಸುಜಾತಾ ಮತ್ತು ಅವರ ಕುಟುಂಬಕ್ಕೆ ಕಾಡಾನೆಯೊಂದು ಬೆಟ್ಟದಲ್ಲಿ ಕಾವಲಾಗಿ ನಿಂತಿತ್ತು. ” ಅದು ಸೋಮವಾರ ರಾತ್ರಿ 4 ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದರಿಂದ, ಮಧ್ಯರಾತ್ರಿ 1.15 ಕ್ಕೆ ಎಚ್ಚರವಾಯಿತು. ದೊಡ್ಡ ಶಬ್ದ ಕೇಳಿಸಿದ ಬೆನ್ನಲ್ಲೇ ನಮ್ಮ ಮನೆಗೆ ನೀರು ನುಗ್ಗಿತು. ನಾವೆಲ್ಲರೂ ಹಾಸಿಗೆಯ ಮೇಲೆ ಕುಳಿತೆವು . ಆಗ ನಮ್ಮ ನೆರೆಹೊರೆಯವರ ಮನೆಗಳ ಅವಶೇಷಗಳ ಜೊತೆಗೆ ದೊಡ್ಡ ಮರದ ದಿಮ್ಮಿಗಳು ಮನೆಯ ಮೇಲೆ ಬಡಿಯುತ್ತಿದ್ದವು. ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆ ಕುಸಿದು ಬಿದ್ದಿದ್ದು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಗುಡ್ಡ ಜರಿದು ಮನೆ ಉರುಳಿ ಬಿದ್ದಾಗ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತು. ನಾನು ಇಟ್ಟಿಗೆ ರಾಶಿಯನ್ನು ಸರಿಸಿ ಜಾಗ ಮಾಡಿಕೊಂಡು ಮಗಳು ಮೊಮ್ಮಗಳು ಅಳಿಯ ಎಲ್ಲಾರೂ ಹೊರ ಬಂದು ಬೆಟ್ಟದ ಬಳಿ ಓಡಿದೇವು. ಹೇಗೋ ಒದ್ದಾಡಿ ಬೆಟ್ಟದ ಬಳಿಗೆ ಬಂದಾಗ ಅಲ್ಲಿ ಎದುರಾಗಿದ್ದು ದೊಡ್ಡ ಕಾಡಾನೆ. ನಾವು ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪಾ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ರಾತ್ರಿ ಪೂರ್ತಿ ಮಳೆ, ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದ್ದು. ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಆ ಆನೆಯಲ್ಲೇ ನಾನು ಹೇಳಿದ್ದು, ತುಂಬಾ ಕಷ್ಟದಲ್ಲಿದ್ದೇವೆ. ಬೆಳಕು ಇಲ್ಲ, ಪೂರಾ ಕತ್ತಲೆ. ನಮ್ಮನ್ನು ಏನೂ ಮಾಡಬೇಡಪ್ಪಾ ಎಂದು ಹೇಳಿದಾಗ ಆನೆ ಕಣ್ಣೀರು ಹಾಕುತ್ತಾ ಬೆಳಗಾಗುವವರೆಗೆ ನಮ್ಮ ಜತೆ ನಿಂತಿತು. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗ ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದ. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಸಂತ್ರಸ್ತ ಮಹಿಳೆ ತನಾಗದ ಅನುಭವ ಹಂಚಿಕೊಂಡಿದ್ದಾರೆ.