ಮಡಿಕೇರಿ NEWS DESK ಆ.6 : ಕೇರಳದ ವಯನಾಡಿನಲ್ಲಿ ನಡೆದ ದುರಂತ ಮತ್ತು 2018, 2019 ರಲ್ಲಿ ಕೊಡಗಿನಲ್ಲಿ ನಡೆದಿರುವ ಮಳೆ ಅನಾಹುತದ ಆತಂಕ ಹಸಿರಾಗಿರುವ ಬೆನ್ನಲ್ಲೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಭೂ ಗರ್ಭ ಶಾಸ್ತ್ರಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಲು ಮುಂದಾಗಿದೆ. ಮುಂದಿನ ವಾರ ಈ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸುವ ನಿರೀಕ್ಷೆಗಳಿದ್ದು, ಭೂ ಕುಸಿತದ ಪ್ರದೇಶಗಳನ್ನು ಅಧ್ಯಯನ ನಡೆಸಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಭೂಕುಸಿತ ಘಟನೆ ವರದಿಯಾದ ಎಲ್ಲಾ ಗ್ರಾಮಗಳಿಗೂ ತೆರಳಿ ವಾಸ್ತವ ಸ್ಥಿತಿ, ಭೌಗೋಳಿಕ ಲಕ್ಷಣಗಳು, ಭೂಪದರಗಳ ರಚನೆ, ಕಲ್ಲಿನ ವಿಧಗಳು ಮತ್ತು ಭೂಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ಅಧ್ಯಯನ ನಡೆಸಲಿದೆ. ತಮ್ಮ ಪರಿಶೀಲನೆಯ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ ಎಂದು ಹೇಳಿದರು. ಜಿಎಸ್‌ಐ ವಿಜ್ಞಾನಿಗಳು 2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪ ಸಂದರ್ಭ ಜಿಲ್ಲೆಗೆ ಆಗಮಿಸಿ ವಿವಿಧ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ವಿಜ್ಞಾನಿಗಳಾದ ಸುನಂದನ್ ಬಸು ಮತ್ತು ಕಪಿಲ್ ಸಿಂಗ್ ಮಡಿಕೇರಿ ತಾಲೂಕಿನ ಮೇಘತ್ತಾಳು, ಹೆಮ್ಮೆತ್ತಾಳು, ಮಕ್ಕಂದೂರು, ಕಾಲೂರು, ಸರಣಿ ಭೂ ಕಂಪನ ಸಂಭವಿಸಿದ್ದ ಸಂಪಾಜೆ ವ್ಯಾಪ್ತಿಯ ಗ್ರಾಮಗಳು, ಸೋಮವಾರಪೇಟೆ ವ್ಯಾಪ್ತಿಯ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ, 2019ರಲ್ಲಿ ಜೀವಹಾನಿ ಸಂಭವಿಸಿದ್ದ ಭಾಗಮಂಡಲದ ಕೋರಂಗಾಲ, ವಿರಾಜಪೇಟೆಯಲ್ಲಿ ಘಟಿಸಿದ ಭೂಕುಸಿತದಿಂದ ನಾಶವಾಗಿದ್ದ ತೋರಾ ಗ್ರಾಮ, ಬೆಟ್ಟ ಬಿರುಕು ಬಿಟ್ಟಿರುವ ಮಲೆತಿರಿಕೆ ಬೆಟ್ಟದ ಜನ ವಸತಿ ಪ್ರದೇಶ, 2020ರಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತ್ತು. ಮಾತ್ರವಲ್ಲದೇ ಭೂ ಕುಸಿತಕ್ಕೆ ನಿಖರ ಕಾರಣಗಳು, ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು, ಸಂಭಾವ್ಯ ಭೂ ಕುಸಿತ ಸಾಧ್ಯತೆ ಮತ್ತು ಪ್ರವಾಹ ಏರ್ಪಡುವ ಗ್ರಾಮಗಳನ್ನು ಪಟ್ಟಿ ಮಾಡಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೂ ವೈಜ್ಞಾನಿಕ ವರದಿ ಸಲ್ಲಿಸಿದ್ದರು.
ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿ ಸುರಿದಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ಸುರಿದ ಮಳೆ ಆತಂಕವನ್ನು ಸೃಷ್ಟಿಸಿತ್ತಲ್ಲದೆ ಅಪಾರ ನಷ್ಟವನ್ನುಂಟು ಮಾಡಿತ್ತು. ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಜಿಲ್ಲಾಡಳಿತ ಕೂಡ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಎನ್‌ಡಿಆರ್‌ಎಫ್ ಯೋಧರ ಒಂದು ತಂಡ ಬೀಡು ಬಿಟ್ಟಿದೆ.
ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೊಡಗಿನಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ಗುರುತು ಮಾಡಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮಳೆ ವಿರಾಮ ನೀಡಿದ್ದು, ಮುಂದಿನ ದಿನಗಳಲ್ಲಿ ಅಪಾಯದ ಮಟ್ಟ ಮೀರಿ ಮಳೆಯಾದರೆ 2ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳಿದೆ. ಮಳೆಯ ಮುನ್ಸೂಚನೆಯನ್ನು ಆಧರಿಸಿ ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇ.24ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.