ಮಡಿಕೇರಿ ಆ.8 NEWS DESK : ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಸಾವಿಗಿಂತ, ಸ್ವಯಂಕೃತ ತಪ್ಪುಗಳಿಂದ ಉಂಟಾಗುವ ಸಾವಿನ ಸಂಖ್ಯೆ ಹೆಚ್ಚಿದೆ. ಕಳೆದ 4 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳಿಗೆ ತುತ್ತಾಗಿ ಸುಮಾರು 144 ಮಂದಿ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಕಾರದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರಾಕೃತಿಕ ವಿಕೋಪದ ಬಗ್ಗೆ ಮುನ್ನೆಚ್ಚರ ವಹಿಸಿದರೂ ಸಹ ಅಲ್ಲಲ್ಲಿ ವಿಕೋಪಗಳು ಸಂಭವಿಸಿ ಸಾವು ನೋವುಗಳು ಉಂಟಾಗುತ್ತದೆ. ಆದರೆ ಸ್ವಯಂಕೃತದಿಂದ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಾವು ನೋವುಗಳು ಸಂಭವಿಸುತ್ತಿರುವುದು ದುರಂತ ಎಂದು ಸುಂದರ್ ರಾಜ್ ಹೇಳಿದರು.
::: 144 ಸಾವು :::
ಕಳೆದ ನಾಲ್ಕು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾಗಿ ಸುಮಾರು 144 ಮಂದಿ ಮೃತಪಟ್ಟಿದ್ದಾರೆ. 2021 ರಲ್ಲಿ 15 ಮಂದಿ, 2022 ರಲ್ಲಿ 50, 2023 ರಲ್ಲಿ 47, 2024 ರ ಜುಲೈ ಅಂತ್ಯದವರೆಗೆ 34 ಮಂದಿ ಮೃತಪಟ್ಟಿರುವುದು ವರದಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು. ಕಾಣೆಯಾದ ಹೆಣ್ಣು ಮಕ್ಕಳ ಪ್ರಕರಣ ಸೇರಿದಂತೆ, ಅಪ್ರಾಪ್ತೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಕಳೆದ ನಾಲ್ಕು ವರ್ಷದಲ್ಲಿ 125 ಪ್ರಕರಣ ದಾಖಲಾಗಿದೆ. ಇದರಲ್ಲಿ 61 ಪ್ರಕರಣಗಳು ಪೋಕ್ಸೋ ಪ್ರಕರಣಗಳಾಗಿ ಪರಿವರ್ತನೆಗೊಂಡಿದೆ. 2021 ರಲ್ಲಿ 29 ಇದರಲ್ಲಿ 13 ಪೋಕ್ಸೋ, 2022 ರಲ್ಲಿ 36 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 17 ಪೋಕ್ಸೋ, 2023 ರಲ್ಲಿ 33 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 12 ಪೋಕ್ಸೋ, 2024 ರ ಜುಲೈ ಅಂತ್ಯದವರೆಗೆ 27 ಪ್ರಕರಣಗಳಲ್ಲಿ 19 ಪೋಕ್ಸೋ ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು. ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ ಪರಿಣಾಮ ಮೂವರಿಗೆ 10 ವರ್ಷಗಳ ಕಾಲ ಕಠಿಣ ಶಿಕ್ಷೆ ಆಗಿದೆ. ಜೊತೆಗೆ ತಲಾ 1 ಲಕ್ಷ ರೂ ವರೆಗೆ ದಂಡ ವಿಧಿಸಲಾಗಿದೆ. ಹಾಗೆಯೇ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ಮಾಡಿದರು. ‘ಅಫೀಮು, ಹೆರಾಯಿನ್, ಕೋಕೇನ್, ಚರಸ್ ಮತ್ತಿತರ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಬಾರದು. ಪ್ರತಿಯೊಬ್ಬರೂ ಸತ್ಪ್ರಜೆಯಾಗಿ ಬದುಕಬೇಕು. ಪೋಷಕರು ಸೇರಿದಂತೆ ಎಲ್ಲರೂ ಯುವಜನರಿಗೆ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯರಾದ ಡಾ.ಡೆವಿನ್ ಕರ್ಕಡ ಅವರು ಮಾತನಾಡಿ ಮದ್ಯ ಹಾಗೂ ಮಾದಕ ವಸ್ತುಗಳ ಅವಲಂಬನೆಗೆ ಒಳಗಾಗುವುದು ವ್ಯಸನವಾಗಿದೆ. ಇದು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದರು.
ವ್ಯಸನವು ಕುತೂಹಲ, ಸ್ನೇಹಿತರ ಒತ್ತಾಯ ಹೀಗೆ ವಿವಿಧ ಕಾರಣಗಳಿಂದ ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಾರೆ. ಧೂಮಪಾನ, ಗಾಂಜಾ ಮುಂತಾದವನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಮತ್ತಿತರ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ವ್ಯಸನದಿಂದ ದೂರವಾಗಲು ಹಲವು ಮಾರ್ಗೋಪಾಯಗಳು ಇದ್ದು, ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 14416 ಇದಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು. ‘ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಪುಸ್ತಕ ಓದುವುದಕ್ಕಿಂತ, ಮೊಬೈಲ್ ನೋಡುವುದು ಚಟವಾಗಿದೆ. ಇದು ಆರೋಗ್ಯಯುತ ಬೆಳವಣಿಗೆಯಲ್ಲ ಎಂದು ಡಾ.ಡೆವಿನ್ ಕರ್ಕಡ ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸತೀಶ್ ಕುಮಾರ್ ಎಸ್.ವಿ. ಅವರು ಮಾತನಾಡಿ ಮಾದಕ ವಸ್ತುಗಳ ಚಟಕ್ಕೆ ತುತ್ತಾದಲ್ಲಿ ಕುಟುಂಬ ಸಂಕಷ್ಟ ಎದುರಿಸಲಿದೆ. ಇದರಿಂದಾಗಿ ಸಮಾಜದ ಅಭಿವೃದ್ಧಿ ಕುಂಟಿತವಾಗಲಿದೆ ಎಂದರು. ಕ್ಲಿನಿಕಲ್ ಸೈಕಾಲಜಿಸ್ಟ್ ಸಿ.ರಮೇಶ್ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಕೃಷಿಕರು ಮತ್ತು ಸೈನಿಕರು ಮಾದರಿಯಾಗಬೇಕು, ಯಾವುದೇ ಸಿನಿಮಾ ನಟ, ನಟಿಯರು ಮಾದರಿ ಅಲ್ಲ ಎಂದು ಪ್ರತಿಪಾದಿಸಿದರು. ಈ ಹಿಂದೆ ಮಕ್ಕಳಿಗೆ ಪ್ರಾಣಿ, ಪಕ್ಷಿ, ಚಂದ್ರನನ್ನು ತೋರಿಸಿ ಆಹಾರ ತಿನ್ನಿಸುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ತೋರಿಸಿಕೊಂಡು ಊಟ ಮಾಡಿಸುತ್ತಾರೆ ಇದು ಒಳ್ಳೆಯ ಬೆಳವಣಿಗೆಯೇ ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಮಾತನಾಡಿ ಜೀವ ಇದ್ದಲ್ಲಿ ಮಾತ್ರ ಜೀವನ ಎಂಬುದನ್ನು ಅರಿತುಕೊಳ್ಳಬೇಕು. ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಬೇಕು. ಕೆಲವರು ತಾವು ಕೆಡುವುದರ ಜೊತೆಗೆ ಇತರರನ್ನು ಕೆಡಿಸಲು ಮುಂದಾಗುತ್ತಾರೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಯಾವುದೇ ಕಾರಣಕ್ಕೂ ಹಾದಿ ತಪ್ಪಬಾರದು ಎಂದು ಕಿವಿ ಮಾತು ಹೇಳಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ್ದಾರೆ. ಇವರ ಜನ್ಮ ದಿನವನ್ನು ಆಗಸ್ಟ್ ತಿಂಗಳಲ್ಲಿ ‘ವ್ಯಸನಮುಕ್ತ ದಿನಾಚರಣೆ’ಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಎಂದರು. ಉಪನ್ಯಾಸಕರಾದ ಗೌರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪೂರ್ಣಿಮಾ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಉಪನ್ಯಾಸಕರಾದ ಚಿದಾನಂದ ವಂದಿಸಿದರು.