ಮಡಿಕೇರಿ ಜ.27 NEWS DESK : ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಗೌರವ ಪದ್ಮಶ್ರೀ ಪುರಸ್ಕಾರ ದೊರೆತ್ತಿರುವುದು ಹೆಮ್ಮೆಯ ವಿಚಾರವೆಂದು ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಪತ್ರಿಕಾ ಪ್ರಕಟಣೆ ಮೂಲಕ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಅಭಿನಂದನೆ ಸಲ್ಲಿಸಿರುವ ಸಂಘಟನೆಗಳು ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಸಾಧನೆಗೆ ಸಂದ ಗೌರವ ಎಂದು ಬಣ್ಣಿಸಿವೆ. ಕಲಬುರಗಿ ಮೂಲದ ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ಮೂಲತಃ ಕಲಬುರಗಿಯವರಾಗಿದ್ದು, ಬೆಂಗಳೂರಿನ ಕಿದ್ವಾಯಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಬಡತನದಲ್ಲಿ ಬೆಳೆದ ಅವರು ವೈದ್ಯ ಲೋಕದ ಮಹಾನ್ ಸಾಧಕರ ಅಗ್ರಗಣ್ಯರ ಸಾಲಿನಲ್ಲಿದ್ದಾರೆ. 1980ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ಪದವಿ ಪಡೆದ ಅವರು, 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಸೇರ್ಪಡೆಯಾದರು. ಮೂರು ದಶಕಗಳಿಗೂ ಹೆಚ್ಚಿನ ಕಾಲ ಕ್ಯಾನ್ಸರ್ ಪೀಡಿತರ ಸೇವೆ ಮಾಡಿದ್ದಾರೆ. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಹತ್ತಾರು ಪ್ರೌಢ ಪ್ರಬಂಧಗಳ ಮಂಡನೆ, ಸ್ತನ ಕ್ಯಾನ್ಸರ್ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಅಭಿಯಾನ ನಡೆಸಿ ಯಶಸ್ವಿಯಾಗಿದ್ದಾರೆ. ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ ಎನಿಸಿದೆ ಎಂದು ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸಂಘಟನೆಗಳು ತಿಳಿಸಿವೆ.