ಮಡಿಕೇರಿ ಆ.10 NEWS DESK : ಮಾರ್ಕೆಟ್ ಸಂತೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಮತ್ತು ಮಡಿಕೇರಿ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವವನ್ನು ನಗರದ ವೃದ್ಧಾಶ್ರಮದ ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದೆಂದು ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸ್ನೇಹಜೀವಿ, ನೊಂದವರ ಬಾಳಿನ ಆಶಾ ಕಿರಣ” ಎಂಬ ಘೋಷವಾಕ್ಯದೊಂದಿಗೆ ನಗರದ “ತನಲ್” ವಿಕಾಸ್ ಜನಸೇವಾ ಟ್ರಸ್ಟ್ ನ ವೃದ್ಧಾಶ್ರಮದಲ್ಲಿರುವ ಸುಮಾರು 32 ಮಂದಿ ಹಿರಿಯರೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಆಚರಿಸಲಾಗುತ್ತದೆ ಎಂದರು. ಅಂದು ಬೆಳಿಗ್ಗೆ 9.30 ಗಂಟೆಗೆ ಸುಬೇದಾರ್ ಕ್ಯಾಪ್ಟನ್ ಹೆನ್ರಿ ಡೇವಿಡ್ ವೇಗಸ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಿದ್ದು, 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ನಗರಸಭಾ ಪೌರಾಯುಕ್ತ ವಿಜಯ್ ಉದ್ಘಾಟಲಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾರ್ಕೆಟ್ ಸಂತೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಆಲಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಬಶೀರ್ ಅಹ್ಮದ್, ಅಮೀನ್ ಮೊಯಿಸಿನ್, ಮನ್ಸೂರ್ ಆಲಿ, ಕೆ.ಎಸ್.ರಮೇಶ್, ಸವಿತಾ ರಾಕೇಶ್, ನೀಮಾ ಅರ್ಷದ್, ಮೇರಿ ವೇಗಸ್, ಮುಸ್ತಫ ಪಾಲ್ಗೊಳ್ಳಲಿದ್ದಾರೆ ಎಂದರು. ಸಭಾ ಕಾರ್ಯಕ್ರಮದ ಬಳಿಕ ಸಮಿತಿಯ ಸದಸ್ಯರು ಹಾಗೂ ಕಲಾವಿದರ ಬಳಗ ಫೈವ್ ಸ್ಟಾರ್ ಸಿಂಗರ್ಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ವೃದ್ಧಾಶ್ರಮದ ಹಿರಿಯರೊಂದಿಗೆ ಭೋಜನವನ್ನು ಏರ್ಪಡಿಸಲಾಗಿದೆ ಎಂದು ಎಂ.ಎ.ಅಬ್ದುಲ್ ರಜಾಕ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಆಲಿ, ಉಪಾಧ್ಯಕ್ಷ ಸುಲೈಮಾನ್, ಸದಸ್ಯರುಗಳಾದ ಭಾಷ, ಪಿ.ಎಂ.ಅಬ್ದುಲ್ ರಜಾಕ್ ಹಾಗೂ ಶಿವ ಉಪಸ್ಥಿತರಿದ್ದರು. 







