ಸೋಮವಾರಪೇಟೆ ಆ.14 NEWS DESK : ಸಿ ಮತ್ತು ಡಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಜಾಗ ವ್ಯವಸಾಯದ ಭೂಮಿಯಾಗಿದ್ದು, ಹಕ್ಕುಪತ್ರ ಸಿಗುವ ಹೋರಾಟ ಮುಂದುವರಿಸುವಂತೆ ರೈತ ಪ್ರಮುಖರು ಸಭೆಯಲ್ಲಿ ನಿರ್ಧರಿಸಿದರು. ಪಟ್ಟಣದ ಒಕ್ಕಲಿಗರ ಸಮೂದಾಯ ಭವನದಲ್ಲಿ ನಡೆದ ತಾಲ್ಲೂಕಿನ 40 ಗ್ರಾಮಗಳ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಸಿ ಮತ್ತು ಡಿ ಭೂಮಿಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮಡಿಕೇರಿ ಶಾಸಕ ಡಾ.ಮಂತರ್‍ಗೌಡ ಸಭೆಯಲ್ಲಿ ಭಾಗವಹಿಸಿ, ರೈತರ ಸಮಸ್ಯೆಗಳನ್ನು ಆಲಿಸಿದರು. ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಸಿ ಮತ್ತು ಡಿ ಭೂಮಿಯಿದೆ. ಈ ಭೂಮಿಯಲ್ಲೇ ಕೃಷಿ ಮಾಡುತ್ತಿದ್ದಾರೆ. ಎರಡು ಎಕರೆಯಿಂದ 5 ಎಕರೆ ಆಸ್ತಿಯಿರುವ ನೂರಾರು ಕುಟುಂಬಗಳಿವೆ. ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. 1991ರಲ್ಲಿ ಕೆಲ ಕಂದಾಯ ಇಲಾಖೆಯ ಅಧಿಕಾರಿಗಳು ಶಾಂತಳ್ಳಿ ಹೋಬಳಿಯಲ್ಲಿನ ನೂರಾರು ಎಕರೆ ಜಮೀನನ್ನು ಸಿ ಮತ್ತು ಡಿ ಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರಕ್ಕೆ ಬರೆದರು. ಜನರು ಹೋರಾಟ ಮಾಡಲಿಲ್ಲ. ಈಗ ಸುರ್ಪಿಂ ಕೋರ್ಟ್ ಆದೇಶದಂತೆ ಭೂಮಿಯನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ ಬಂದಿದೆ. ಕಾನೂನು ಹೋರಾಟವನ್ನು ಮಾಡಲೇಬೇಕಾದ ಅನಿವಾರ್ಯತೆ ಒದಗಿದೆ ಎಂದು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು. ಸಿ ಮತ್ತು ಡಿ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವ ಬಗ್ಗೆ ಕಂದಾಯ ಇಲಾಖೆಯ ವಿರುದ್ಧ ಕಳೆದ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಯಾರು ಸಿರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಈಗ ಕಾನೂನು ಹೋರಾಟ ಮಾಡದಿದ್ದರೆ, ಎಷ್ಟೋ ಕುಟುಂಬಗಳು ಆಸ್ತಿ ಕಳೆದುಕೊಂಡು ನಿರ್ಗತಿಕರಾಗಬೇಕಾಗುತ್ತದೆ ಎಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು. ರಾಜಕೀಯ ರಹಿತ ಹೋರಾಟ ಮಾಡಲೇಬೇಕಾಗಿದೆ. ಕೊಡಗಿನ ಇಬ್ಬರು ಶಾಸಕರ ನೇತೃತ್ವದಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಲೋಕಸಭಾ ಸದಸ್ಯರು. ಮಾಜಿ ಶಾಸಕರು, ಮಾಜಿ ಸಂಸದರು ಹಾಗು ರೈತರ ಸಮ್ಮಖದಲ್ಲಿ ಸಭೆ ನಡೆಸಿ, ಮುಂದಿನ ಹೋರಾಟವನ್ನು ನಿಗದಿ ಮಾಡಿಕೊಳ್ಳಬೇಕಾಗಿದೆ ಎಂದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಎಷ್ಟು ಸಿ ಮತ್ತು ಡಿ ಮತ್ತು ಸಾಮಾಜಿಕ ಅರಣ್ಯ ಭೂಮಿ ವಿಸ್ತೀರ್ಣವನ್ನು ಕಂಡುಕೊಳ್ಳಬೇಕಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿದರೆ, ಭೂಮಿಯ ವಿಸ್ತಿರ್ಣ ತಿಳಿಯಲಿದೆ. ನಂತರ ಕಾನೂನು ಹೋರಾಟ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ರಾಜಕೀಯ ರಹಿತ ಹೋರಾಟ ಮಾಡಬೇಕು. ನಮ್ಮ ಆಸ್ತಿಯನ್ನು ನಾವೇ ಕಾಪಾಡಿಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷದಿಂದ ನಮ್ಮ ಸ್ವಂತ ಆಸ್ತಿ ರಕ್ಷಣೆ ಅಸಾಧ್ಯದ ಮಾತು. ಜಿಲ್ಲೆಯ ಟೆನ್ಯೂರ್‍ಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲ. ಕಂದಾಯ ಇಲಾಖೆಯ ಭ್ರಷ್ಟರಿಂದ ರೈತರ ಆಸ್ತಿ ದುರಸ್ತಿ ಆಗಿಲ್ಲ. ಇದೇ ಕಾರಣದಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಚ ಕೊಟ್ಟವನ ಭೂಮಿ ದುರಸ್ತಿ ಆಗುತ್ತಿದೆ. ಹೊರ ರಾಜ್ಯದ ಬಂಡವಾಳ ಶಾಹಿಗಳು ಕೊಡಗಿನಲ್ಲಿ ಭೂಮಿ ಖರೀದಿಸಿದರೆ, ಕೂಡಲೆ ದುರಸ್ತಿ ಆಗುತ್ತದೆ. ಇದೊಂದು ದಂಧೆಯಾಗಿದೆ ಎಂದು ಪ್ರಮುಖರಾದ ಎಸ್.ಬಿ.ಭರತ್ ಮತ್ತಿತರು ಆರೋಪಿಸಿದರು. ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ.ಮೇದಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವಕೀಲ ಬಿ.ಜೆ.ದೀಪಕ್, ದಿವಾಕರ್, ಲಕ್ಷ್ಮಣ್, ಮುದ್ದಪ್ಪ ಮತ್ತಿತರರು ಸಲಹೆ ನೀಡಿದರು. ಸಿ ಮತ್ತು ಡಿ ಭೂಮಿ, ಸಾಮಾಜಿಕ ಅರಣ್ಯ ಒತ್ತುವರಿ ತೆರವಿನ ಬಗ್ಗೆ ಕೂತಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ರೈತರಿಗೋಸ್ಕರ ಹೋರಾಟ ಮಾಡಲು ನಾನು ಮತ್ತು ವಿರಾಜಪೇಟೆ ಶಾಸಕರು ಸದಾ ಸಿದ್ದರಿದ್ದೇವೆ. ಕಾನೂನು ಹೋರಾಟದಿಂದ ರೈತರಿಗೆ ನ್ಯಾಯ ಒದಗಿಸಿಕೊಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಅರಣ್ಯ ಹಾಗು ಕಂದಾಯ ಸಚಿವರನ್ನು ಜಿಲ್ಲೆಗೆ ಬರಮಾಡಿಕೊಂಡು ಎಲ್ಲಾ ಸಮಸ್ಯೆಗಳನ್ನು ಇತ್ಯಾರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಡಾ.ಮಂತರ್‍ಗೌಡ ಹೇಳಿದರು. ಸುಪ್ರ್ರೀಕೋರ್ಟ್ ಆದೇಶದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿ ಮೈಸೂರು ವಿಭಾಗದಲ್ಲಿ ನಿವೃತ್ತ ಕೆ.ಎ.ಎಸ್. ಅಧಿಕಾರಿ ರೇಣುಕಾಂಬ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಅಲ್ಲಿಂದ ಗ್ರಾಮಗಳಿಗೆ ನೋಟೀಸು ಜಾರಿಯಾಗುತ್ತಿದೆ. ಒತ್ತುವರಿಗೆ ಸಂಬಂಧಿಸಿದ ಆಸ್ತಿಯ ದಾಖಲೆ ಇದ್ದವರು ಸಮಿತಿಗೆ ಒದಗಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಲಾಗುವುದು. ಡಿಸಿಎಫ್ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಸಭೆಯನ್ನು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.