ಮಡಿಕೇರಿ NEWS DESK ಏ.23 : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಯುವ ವೇದಿಕೆಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರವಾಸಿಗರನ್ನು ಗುರಿ ಮಾಡಿ ಹತ್ಯೆಗೈದಿರುವ ಪಾಕಿಸ್ತಾನಿ ಪ್ರೇರಿತ ದಾಳಿಯನ್ನು ತೀವ್ರವಾಗಿ ಖಂಡಿಸುವುದಲ್ಲದೆ, ಮೃತರ ಆತ್ಮಕ್ಕೆ ಶಾಂತಿ ಕೋರುವುದಾಗಿ ತಿಳಿಸಿದ್ದಾರೆ. ಅಮಾಯಕರ ಮೇಲೆ ಉಗ್ರರು ನಡೆಸಿರುವ ದಾಳಿ ಹೇಡಿತನದಿಂದ ಕೂಡಿದೆ, ಈ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ದೇಶದ ಭದ್ರತೆಯನ್ನು ಹೆಚ್ಚಿಸಬೇಕು. ಭಯೋತ್ಪಾದಕರ ನಿಗ್ರಹದೊಂದಿಗೆ ದೇಶದ್ರೋಹಿಗಳಿಗೆ ಆಶ್ರಯ ನೀಡುವ ಮತ್ತು ಬೆಂಬಲಕ್ಕೆ ನಿಲ್ಲುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಉಗ್ರರ ಕೃತ್ಯವನ್ನು ಖಂಡಿಸಬೇಕು ಮತ್ತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬೆಂಬಲ ಸೂಚಿಸಬೇಕು ಎಂದು ಸುರೇಶ್ ಚಕ್ರವರ್ತಿ ತಿಳಿಸಿದ್ದಾರೆ.










