ಮಡಿಕೇರಿ ಏ.23 NEWS DESK : ಬೀದರ್ ನಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು, ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸದಂತೆ ತಡೆಯೊಡ್ಡಿರುವುದು ಮತ್ತು ಕೊಡವ ಧಾರ್ಮಿಕ ಸಂಸ್ಕಾರದ ಬಂದೂಕಿನ ಹಕ್ಕುಗಳಿಗೆ ಅಡ್ಡಿಪಡಿಸಿರುವುದು, ಈ ಮೂರು ಪ್ರಕರಣಗಳು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಇಟಿ ಪರೀಕ್ಷೆ ಸಂದರ್ಭ ಸಿಬ್ಬಂದಿಗಳು ಬಲವಂತವಾಗಿ ಬ್ರಾಹ್ಮಣ ವಿದ್ಯಾರ್ಥಿಯ ಪವಿತ್ರ ಜನಿವಾರವನ್ನು ತೆಗೆಸಿದ್ದಾರೆ. ದೇವಾಲಯ ಪ್ರವೇಶಿಸದಂತೆ ತಡೆದು ಕೊಡವರ ಸಾಂಪ್ರದಾಯಿಕ ಉಡುಪಿಗೆ ಅಗೌರವ ತೋರಲಾಗಿದೆ. ಕೊಡವ ಧಾರ್ಮಿಕ ಸಂಸ್ಕಾರದ ಬಂದೂಕಿನ ಹಕ್ಕುಗಳಿಗೆ ಅಡ್ಡಿಪಡಿಸಿದರು. ಈ ಬೆಳವಣಿಗೆಗಳು ಅತ್ಯಂತ ಸೂಕ್ಷ್ಮ ಸಮುದಾಯಗಳ ಧಾರ್ಮಿಕ ಹಕ್ಕುಗಳಿಗೆ ಒಡ್ಡಿರುವ ಸವಾಲಾಗಿದೆ ಮತ್ತು ಸಂವಿಧಾನದ ಉಲ್ಲಂಘನೆಯಾಗಿದೆ. ಇದು ತಾಲಿಬಾನಿಸಂ ಸಂಸ್ಕೃತಿಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಆರೋಪಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಭಾರತೀಯ ಸಂವಿಧಾನದ 25, 26 ಮತ್ತು 28 ನೇ ವಿಧಿಗಳನ್ನು ಉಲ್ಲಂಘಿಸಿದಂತ್ತಾಗಿದೆ. ಆದ್ದರಿಂದ ಕೊಡವರು ಹಾಗೂ ಬ್ರಾಹ್ಮಣರಂತಹ ಸೂಕ್ಷ್ಮ ಸಮುದಾಯಗಳು ಸೇರಿದಂತೆ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಸರ್ಕಾರ ರಕ್ಷಿಸಬೇಕು. ಇಂತಹ ಘಟನೆಗಳನ್ನು ತಡೆಗಟ್ಟಲು ಸಾಂವಿಧಾನಿಕ ಕಾನೂನುಗಳು ಮತ್ತು ನಿಬಂಧನೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಮತ್ತು ಬಹುಸಂಖ್ಯಾತರು ಸೂಕ್ಷ್ಮ ಸಮುದಾಯಗಳಿಗೆ ಬೆದರಿಕೆ ಒಡ್ಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.











