ಭಾಗಮಂಡಲ NEWS DESK ಆ.15 : ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಬಂದೂಕು ಖರೀದಿ ಮಾಡಿದ ವ್ಯಕ್ತಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಜಿಲ್ಲೆ ಮೂಲದ ಸುರೇಶ್ (52) ಎಂಬಾತನೇ ಬಂಧಿತ ಆರೋಪಿ. ಈತನ ಮನೆ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು, 02 ನಾಡ ಬಂದೂಕು(ಎಸ್.ಬಿ.ಬಿ.ಎಲ್) ಮತ್ತು 01 ನಾಡ ಪಿಸ್ತೂಲ್ ಪತ್ತೆಯಾಗಿದ್ದು, ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸುರೇಶ್ ಅಕ್ರಮವಾಗಿ ತಯಾರಿಸಿರುವ ನಾಡ ಬಂದೂಕುಗಳನ್ನು ಖರೀದಿ ಮಾಡಿದ್ದ ಕರಿಕೆ ಚೆತ್ತುಕಾಯ ಗ್ರಾಮದ ಎನ್.ಜೆ.ಶಿವರಾಮ (45), ಪಿರಿಯಾಪಟ್ಟಣದ ಮಾಗಳಿ ಗ್ರಾಮದ ಎಸ್.ರವಿ (35) ಹಾಗೂ ಭಾಗಮಂಡಲ ದೊಡ್ಡಪುಲಿಕೋಟು ಗ್ರಾಮದ ಕೋಟಿ (55) ಅವರನ್ನು ಕೂಡ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರುಗಳ ಬಳಿ ಇದ್ದ ತಲಾ ಒಂದು ನಾಡ ಬಂದೂಕು (ಎಸ್.ಬಿ.ಬಿ.ಎಲ್) ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 5 ನಾಡ ಬಂದೂಕು(ಎಸ್.ಬಿ.ಬಿ.ಎಲ್) ಮತ್ತು 1 ನಾಡ ಪಿಸ್ತೂಲ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣೆ ಪಿಎಸ್ಐ ಶೋಭಾ ಲಾಮಾಣಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ದಕ್ಷತೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.