
ಮಡಿಕೇರಿ NEWS DESK ಆ.22 : ಪ್ರತೀಶ್ ಪೂವಯ್ಯ ಕಾಸ್ಟಿಂಗ್ ಏಜೆನ್ಸಿ ಮತ್ತು ಪತ್ತಕ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಅದ್ದೂರಿ ಫ್ಯಾಷನ್ ಸಂಭ್ರಮ ‘ಕೂರ್ಗ್ ಫ್ಯಾಷನ್ ರನ್ ವೇ 2026’ ಆ.30ರಂದು ಕುಶಾಲನಗರದ ಆರ್ ಕ್ಯೂಬ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ನಿರೂಪಕರಾದ ಮುಂಡಚಾಡಿರ ರಿನಿ ಭರತ್ ಅವರು ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ವೃತ್ತಿಪರ ಮಟ್ಟದ ಫ್ಯಾಷನ್ ರನ್ ವೇ ಅನುಭವವನ್ನು ಸ್ಥಳೀಯ ಪ್ರತಿಭೆಗಳಿಗೆ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಇಂತಹ ಅವಕಾಶಗಳು ಪ್ರಮುಖ ನಗರಗಳಲ್ಲಿ ವೃತ್ತಿಪರ ಮಾಡೆಲ್ ಗಳಿಗೆ ಮಾತ್ರ ಹೆಚ್ಚು ಲಭ್ಯವಾಗುತ್ತದೆ. ಇದೀಗ ಆ ಅನುಭವವನ್ನು ಕೊಡಗಿನ ಪ್ರತಿಭೆಗಳಿಗೂ ಪರಿಚಯಿಸಲಾಗುತ್ತಿದೆ ಎಂದರು. 16 ರಿ0ದ 50 ವರ್ಷದೊಳಗಿನ ಆಸಕ್ತರು ಮಿಸೆಸ್, ಮಿಸ್, ಮಿಸ್ಟರ್, ಟೀನ್ ಗರ್ಲ್, ಟೀನ್ ಬಾಯ್, ಪ್ರಿನ್ಸ್ ಮತ್ತು ಪ್ರಿನ್ಸೆಸ್ ವಿಭಾಗಗಳಲ್ಲಿ ಭಾಗವಹಿಸಬಹುದು. ಭಾಗವಹಿಸುವವರಿಗೆ ವೃತ್ತಿಪರ ಫೋಟೋಶೂಟ್, ಪ್ರೀಮಿಯಂ ಕಾಸ್ಟ್ಯೂಮ್‌ಗಳು, ವೃತ್ತಿಪರ ಮೇಕಪ್ ಮತ್ತು ಸ್ಟೆöÊಲಿಂಗ್, ರ‍್ಯಾಂಪ್ ವಾಕ್ ಹಾಗೂ ಗ್ರೂಮಿಂಗ್ ತರಬೇತಿ, ಪ್ರಮಾಣಪತ್ರ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ಉದ್ಯಮದ ಪ್ರಮುಖರೊಂದಿಗೆ ನೆಟ್ ವರ್ಕಿಂಗ್ ಸೇರಿದಂತೆ ವಿವಿಧ ಅವಕಾಶಗಳು ದೊರೆಯಲಿದೆ. ಆಯ್ಕೆಯಾದ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಮಾಡೆಲಿಂಗ್, ಚಲನಚಿತ್ರ ಹಾಗೂ ಮ್ಯೂಸಿಕ್ ವೀಡಿಯೋಗಳಲ್ಲಿ ಅವಕಾಶಗಳ ಸಾಧ್ಯತೆಯೂ ಇರಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಸಂಯೋಜಕ ಬಾಳೆಯಡ ಪ್ರತೀಶ್ ಪೂವಯ್ಯ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಮನೋರಂಜನಾ ಮತ್ತು ಫ್ಯಾಷನ್ ಕ್ಷೇತ್ರದ ಪ್ರಮುಖರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಸಮಾಜ ಸೇವಕ ಶರಣ್ ಪೂಣಚ್ಚ, ನಟಿ, ಸಾಮಾಜಿಕ ಜಾಲತಾಣದ ಪ್ರಭಾವಿ ಹಾಗೂ ಸಮಾಜ ಸೇವಕಿ ಬೀನಾ ಜಗದೀಶ್, ಜೀ಼ ಕನ್ನಡದ ಅಣ್ಣಯ್ಯ ಧಾರಾವಾಹಿಯ ನಟ ವಿಕಾಸ್ ಉತ್ತಯ್ಯ, ಅಂತರರಾಷ್ಟ್ರೀಯ ಪೇಜಂಟ್ ಶೋ ಆಯೋಜಕಿ ಮತ್ತು ಕ್ವೀನ್ ಮೇಕರ್ ನಂದಿನಿ ನಾಗರಾಜ್ ಹಾಗೂ ಮಿಸಸ್ ಇಂಡಿಯಾ 2025 ಮತ್ತು ಕಾರ್ಯಕ್ರಮದ ಗ್ರೂಮರ್ ಅರ್ಪಿತಾ ಧರ್ಮಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅರ್ಪಿತಾ ಧರ್ಮಪ್ಪ ಮಾತನಾಡಿ ಕೂರ್ಗ್ ಫ್ಯಾಷನ್ ರನ್ ವೇಯಲ್ಲಿ 30 ಸ್ಪರ್ಧಿಗಳು ಆಕರ್ಷಿಸಲಿದ್ದಾರೆ. ಕೂರ್ಗ್ ಫ್ಯಾಷನ್ ರನ್ ವೇ 2026* ಕೇವಲ ಸ್ಪರ್ಧೆಯಲ್ಲ, ಇದು ಪ್ರತಿಭೆಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು, ಕಲಿಯಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಮತ್ತು ಭವಿಷ್ಯದ ಅವಕಾಶಗಳಿಗೆ ಹೆಜ್ಜೆ ಇಡಲು ಒಂದು ವೃತ್ತಿಪರ ವೇದಿಕೆಯಾಗಿದೆ ಎಂದರು.
ಗಿರೀಶ್ ಪೂಣಚ್ಚ ಅವರು ಮಾತನಾಡಿ ಆತ್ಮವಿಶ್ವಾಸದಿಂದ ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿ ತಾರೆಯಂತೆ ಮಿಂಚಿ ಕನಸನ್ನು ನನಸಾಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ನೋಂದಣಿಗಾಗಿ 9632606913 ನ್ನು ಸಂಪರ್ಕಿಸುವ0ತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕ ಬಾಳೆಯಡ ಸೋಮಣ್ಣ ಉಪಸ್ಥಿತರಿದ್ದರು.









