ವಿರಾಜಪೇಟೆ ಆ.16 NEWS DESK : ಶ್ರೀ ಅರಮೇರಿಯ ಎಸ್ಎಂಎಸ್ ವಿದ್ಯಾಪೀಠದ ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕಳಂಚೇರಿ ಮಠದ ಗದ್ದೆಯಲ್ಲಿ ವಾಡಿಕೆಯಂತೆ ಈ ಬಾರಿಯೂ ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ರೈತ, ಉದ್ಯಮಿ ಉದಿಯಂಡ ಚಂಗಪ್ಪಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕೃ ಷಿ ಭೂಮಿಯೊಡನೆ ತಮಗಿರುವ ಸಂಬಂಧ, ಕೃಷಿಯಿಂದ ರೈತ ಎದುರಿಸುವ ಸವಾಲುಗಳನ್ನು ವಿವರಿಸಿದ ಅವರು, ಅನ್ನದ ಒಂದೊಂದು ಅಗುಳು ಕೂಡ ಎಷ್ಟೊಂದು ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಕ್ರೀಡೆ ಯಂತಹ ಸಹಪಠ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಹೆಸರುಗದ್ದೆ ಕ್ರೀಡಾಕೂಟ ಕೇವಲ ಮನಸ್ಸಿನ ಮನರಂಜನೆಗಾಗಿ ಮಾತ್ರವಲ್ಲ, ಮಣ್ಣಿನಿಂದ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುದನ್ನು ಇಂದಿನ ಮಕ್ಕಳು ಆಲೋಚನೆ ಮಾಡಬೇಕಿದೆ ಎಂದರು. ವಿದ್ಯಾರ್ಥಿಗಳು ಮಣ್ಣಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಕೆಸರುಗದ್ದೆಯಂತಹ ಕ್ರೀಡೋತ್ಸವಕ್ಕೆ ಮೌಲ್ಯ ಬರುತ್ತದೆ. ಕೆಸರುಗದ್ದೆಯ ಮಣ್ಣಿನ ಸುಗಂಧದ ಸೊಗಡು ಬೇರೆ ಯಾವುದರಿಂದಲೂ ನಮಗೆ ಸಿಗಲು ಸಾಧ್ಯವಿಲ್ಲ. ಕೃಷಿಗೆ ಪೂರಕವಾದ ಗೋವುಗಳ ಮೇಲು ವಿದ್ಯಾರ್ಥಿಗಳು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ. ಯಾವುದೇ ಹುದ್ದೆ ಮಾಡಿದರು ಪ್ರತಿಯೊಬ್ಬರು ಮಣ್ಣಿನೊಡನೆ ಸಂಪರ್ಕ ಇಟ್ಟುಕೊಂಡಿರಬೇಕು. ಇತ್ತೀಚಿಗೆ ಭತ್ತದ ಕೃಷಿಯಿಂದ ಹೆಚ್ಚಿನ ಆದಾಯ ಇಲ್ಲದಿದ್ದರೂ ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದೆಂಬ ಕಾಳಜಿಯಿಂದ ಗದ್ದೆಯನ್ನು ನೆಡುವ ಕಾರ್ಯ ಮುಂದುವರೆಯುತ್ತಾ ಬಂದಿದೆ. ಮಕ್ಕಳು ಆಡಿ ಕುಣಿದು ಕುಪ್ಪಳಿಸಿದ ಗದ್ದೆಯು ಸಂತೋಷದಿಂದ ಹೆಚ್ಚಿನ ಇಳುವರಿ ಕೊಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್ಎಮ್ಎಸ್ ವಿದ್ಯಾಪೀಠದ ಪ್ರಾಂಚುಪಾಲರಾದ ಕುಸುಮ್ ಟಿಟೊ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿ, 300 ವರ್ಷದ ಇತಿಹಾಸ ಇರುವ ಶ್ರೀ ಮಠದ ವಿದ್ಯಾಸಂಸ್ಥೆಯು ಕಳೆದ 16 ವರ್ಷಗಳಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯು ನೈಜ ಅನುಭವವನ್ನು ನೀಡುತ್ತದೆ ಎಂದರು. ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಮನಸ್ಸೋ ಇಚ್ಛೆ ಆಡಿ ಕೆಸರಿನಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳಿಂದ ಕೆಸರಿನಲ್ಲಿ ರೋಚಕ ನೃತ್ಯ ಪ್ರದರ್ಶನಗೊಂಡು ಕ್ರೀಡೆಗೆ ಸಾಂಸ್ಕೃತಿಕ ಮೆರುಗನ್ನು ನೀಡಿತು. ಇದೇ ವೇಳೆ ಶಾಲಾ ಸಿಬ್ಬಂದಿಗಳು ಭಾಗಿಗಳಾಗಿ ಕ್ರೀಡಾಕೂಟದ ಯಶಸ್ಸಿಗೆ ಭಾಜನರಾದರು.










