ಮಡಿಕೇರಿ NEWS DESK ಆ.20 : ನಗರದ ಅಭಿವೃದ್ಧಿಯನ್ನು ಮರೆತಿರುವ ಮತ್ತು ಸಾರ್ವಜನಿಕರ ಕಡತಗಳನ್ನು ವಿಲೇವಾರಿ ಮಾಡದೆ ತೊಂದರೆ ನೀಡುತ್ತಿರುವ ನಗರಸಭೆ ವಿರುದ್ಧ ತೀವ್ರ ರೀತಿಯ ಹೋರಾಟ ರೂಪಿಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆಯ ಎಸ್‌ಡಿಪಿಐ ಸದಸ್ಯರಾದ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಆಲಿ ಪೌರಾಯುಕ್ತರ ನಿರ್ಲಕ್ಷö್ಯ ಮತ್ತು ಈ ಹಿಂದಿನ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಸಮರ್ಥ ಆಡಳಿತದಿಂದಾಗಿ ನಗರಸಭೆ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ ಎಂದು ಟೀಕಿಸಿದರು. ಮಡಿಕೇರಿ ನಗರಸಭೆಯ ಮೊದಲನೇ ಅವಧಿ ಪೂರ್ಣಗೊಳಿಸಿ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಆಡಳಿತ ಪಕ್ಷ ಬಿಜೆಪಿ ರಾಜಕೀಯ ಕಸರತ್ತು ನಡೆಸುತ್ತಿದೆ. ನಗರ ಎಂದೂ ಕಂಡರಿಯದ ಹೀನಾಯ ಆಡಳಿತಕ್ಕೆ ಹಿಂದಿನ ಆಡಳಿತ ಮಂಡಳಿ ಸಾಕ್ಷಿಯಾಗಿತ್ತು. ಬಿ.ಜೆ.ಪಿಯ ಸ್ವಾರ್ಥ, ದ್ವೇಷ ಹಾಗೂ ಬಣ ರಾಜಕೀಯದಿಂದಾಗಿ ನಗರಸಭೆ ಅಭಿವೃದ್ಧಿ ಶೂನ್ಯವಾಗಿದೆ. ಅನಿತ ಪೂವಯ್ಯ ಅವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯಾವುದೇ ವಿಶೇಷ ಅನುದಾನವನ್ನು ನಗರಸಭೆಗೆ ತರಲು ಸಾಧ್ಯವಾಗಿಲ್ಲ.
ಮಡಿಕೇರಿಯ ನಾಗರೀಕರು ಸಮಸ್ಯೆಗಳ ಪರಿಹಾರ ಮತ್ತು ಕಡತಗಳ ವಿಲೇವಾರಿಗಾಗಿ ನಗರಸಭೆಗೆ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ 20 ದಿನಗಳಿಂದ ಸರ್ವರ್ ಸಮಸ್ಯೆಯ ನೆಪ ಹೇಳುತ್ತಾ ಕಾಲಹರಣ ಮಾಡಲಾಗುತ್ತಿದೆ. ಪಕ್ಕದ ಯಾವುದೇ ತಾಲ್ಲೂಕು, ಜಿಲ್ಲೆಗಳಲ್ಲಿ ಇಲ್ಲದ ಸಮಸ್ಯೆ ಮಡಿಕೇರಿ ನಗರಸಭೆಯಲ್ಲಿ ಕಂಡು ಬಂದಿದೆ.
ಖಾತೆ ವರ್ಗಾವಣೆಗೆ ಸಂಬಂಧಿಸಿದ ನೂರೆಂಟು ಕಡತಗಳು ನಗರಸಭೆಯಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಸಿಕೊಂಡಿರುವುದರ ಹಿಂದೆ ಲಾಭದಾಯಕ ದುರುದ್ದೇಶ ಎದ್ದು ಕಾಣುತ್ತಿದೆ. ಉಡುಗೊರೆ ಪತ್ರ, ಬಿಡುಗಡೆ ಪತ್ರ, ವಿಭಜನಾ ಪತ್ರದ ಯಾವುದೇ ಖಾತೆಗಳನ್ನು ಮಾಡದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.
ಆಯುಕ್ತರ ಸಾರ್ವಜನಿಕ ಸೇವೆಯ ಇಚ್ಛಾಸಕ್ತಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನವರಿ ತಿಂಗಳಿನಲ್ಲಿ ನಗರಸಭೆಯ ವಿಶೇಷ ಸಭೆ ನಡೆಸಿ 23 ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಪೌರಾಯುಕ್ತ ವಿಜಯ್ ಅವರ ವರ್ಗಾವಣೆಗೆ ಒತ್ತಾಯಿಸಲಾಗಿತ್ತು. ನಿರ್ಣಯವಾಗಿ ಏಳು ತಿಂಗಳಾದರೂ ನಗರಸಭೆಯ ನಿರ್ಧಾರಕ್ಕೆ ವಿರುದ್ಧವಾಗಿ ಮಡಿಕೇರಿ ಶಾಸಕರು ಇವರನ್ನು ಉಳಿಸಿಕೊಂಡಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಬೀದಿ ದೀಪದ ನಿರ್ವಹಣೆ ಸಮರ್ಪಕವಾಗಿಲ್ಲದೆ ಮಡಿಕೇರಿ ನಗರ ಕತ್ತಲೆಯಲ್ಲಿ ಮುಳುಗುತ್ತಿದೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹೊಂಡ ಗುಂಡಿಗಳಾಗಿವೆ. ನಗರೋತ್ಥಾನದ 4ನೇ ಹಂತದ ಕಾಮಗಾರಿ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಕಳೆದ ಅವಧಿಯ 5 ಕೋಟಿ ರೂ. ಬಳಕೆಯಾಗದೆ ಸರ್ಕಾರಕ್ಕೆ ವಾಪಾಸ್ಸಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿಯ ಹೈಟೆಕ್ ಮಾರುಕಟ್ಟೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಕುರಿ-ಕೋಳಿ ಮಳಿಗೆ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಶೆಡ್ ನಿರ್ಮಿಸಿ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಶ್ವಾನಗಳ ಸಂಖ್ಯೆ ಹೆಚ್ಚಾಗಿದ್ದು, ಪಾದಾಚಾರಿಗಳು ಆತಂಕದಿಂದಲೇ ನಡೆದಾಡಬೇಕಾಗಿದೆ ಎಂದರು. ನಗರದಲ್ಲಿ ನಿವೇಶನ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, 1800 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ. ತಕ್ಷಣ ಜಾಗ ಗುರುತಿಸಿ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು. ನಗರದ ಎಲ್ಲಾ ಸಮಸ್ಯೆಗಳನ್ನು ಆಡಳಿತಾಧಿಕಾರಿಗಳು ಒಂದು ವಾರದೊಳಗೆ ಬಗೆಹರಿಸದೆ ಇದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳಾದ ಬಷೀರ್ ಅಹಮ್ಮದ್, ನೀಮಾ ಹರ್ಷದ್ ಹಾಗೂ ಮೇರಿ ವೇಗಸ್ ಉಪಸ್ಥಿತರಿದ್ದರು.