ಮಡಿಕೇರಿ NEWS DESK ಆ.20 : ಹಿಂದುಳಿದ ಆಯೋಗ ಸ್ಥಾಪನೆ, ಭೂ ಸುಧಾರಣೆ ಕಾಯ್ದೆ, ಜನತಾ ನ್ಯಾಯಾಲಯ, ಜೀತ ವಿಮುಕ್ತಿ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಜನಪರ ಕಾರ್ಯಕ್ರಮಗಳನ್ನು ಜಾರಿ ತಂದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ.ದೇವರಾಜು ಅರಸು ಅವರು ಜನಮಾನಸದಲ್ಲಿ ಸದಾ ನೆಲೆಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ. ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ.ದೇವರಾಜು ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಕಂಡ ಹಲವು ಮುಖ್ಯಮಂತ್ರಿಗಳಲ್ಲಿ ದಿವಗಂತ ದೇವರಾಜ ಅರಸು ಅವರು ಶ್ರೇಷ್ಠ ಸಾಮಾಜಿಕ ಸುಧಾರಕರಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವರ ಅಧಿಕಾರವಧಿಯಲ್ಲಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದರು. “ಬಡತನ ನಿರ್ಮೂಲನೆ” ಅವರ ಮೊದಲ ಆದ್ಯತೆ. ಅಧಿಕಾರದಲ್ಲಿರುವಾಗ ಸಮಾಜಕ್ಕೆ ಒಳಿತು ಮಾಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸಿದ ಅರಸು ಅವರು ಜನಮಾನಸದಲ್ಲಿ ಸದಾ ನೆಲೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಭಾರಿ ಕಾರ್ಯನಿರ್ವಹಿಸಿ ಎಲ್ಲಾ ಜಾತಿ, ಜನಾಂಗದವರನ್ನು ಒಗ್ಗೂಡಿಸುವ ಪ್ರಮುಖ ಕಾರ್ಯಮಾಡಿದ್ದಾರೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಆರ್ಥಿಕವಾಗಿ ಸಬಲರಲ್ಲದವರನ್ನು ಶೈಕ್ಷಣಿಕವಾಗಿ ಮುಂದೆ ತರಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವಕಾಶ ವಂಚಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರೋತ್ಸಾಹಧನ, ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ಲೋಕೇಶ್ ಕುಮಾರ್ ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಅಹಿಂದ ಒಕ್ಕೂಟದ ಸ್ಥಾಪಕರು ಹಾಗೂ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಹಿಂದುಳಿದ ವರ್ಗ, ದುರ್ಬಲ ವರ್ಗ, ಅಲ್ಪಸಂಖ್ಯಾತರ ಏಳಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಅಂತಹ ಸಮಾಜ ಸುಧಾರಕರಿಗೆ ಸದಾ ಗೌರವ ಸಲ್ಲಿಸಬೇಕು. ರಾಜಕೀಯ ರಹಿತವಾಗಿ, ಜಾತ್ಯತೀತ ನಿಲುವಿನಲ್ಲಿ ಸರ್ವಧರ್ಮ ಸಮನ್ವಯತೆಯ ಹಾದಿಯಲ್ಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಕಲ್ಪಿಸಿ ಮಲ ಹೊರುವ ಸಂಪ್ರದಾಯವನ್ನು ರದ್ದು ಮಾಡಿದರು. 16 ಸಾವಿರ ಉದ್ಯೋಗ ಖಾಯಂಗೊಳಿಸಿದರು. ಮೈಸೂರಿಗೆ ಕರ್ನಾಟಕ ಎಂದು ನಾಮಕರಣ ಮಾಡಿ ಸಮಸಮಾಜ ನಿರ್ಮಾಣಕ್ಕೆ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸಿದರು ಎಂದು ರಮೇಶ್ ತಿಳಿಸಿದರು. ಕೊಡಗಿನಲ್ಲಿ ಅಹಿಂದ ಒಕ್ಕೂಟ ಅಸ್ತಿತ್ವಕ್ಕೆ ತರುವ ಮೂಲಕ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಅದೇ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಯನ್ನು ನಿರ್ಮಿಸಿಕೊಡುವ ಅವಶ್ಯಕತೆ ಇದೆ ಎಂದರು. ಆಸಕ್ತರು ರಾಜಕೀಯ ರಹಿತವಾದ ಅಹಿಂದ ಸಂಘಟನೆಯ ಸದಸ್ಯರಾಗಬಹುದು. ಸಮಾಜಮುಖಿಯಾಗಿ ಕೆಲಸ ಮಾಡಲು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಹೆಚ್.ಮುಸ್ತಫ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅದ್ಭುತ ವ್ಯಕ್ತಿಯಾಗಿದ್ದು, ಜಾತ್ಯತೀತತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು. ಚದುರಿದ ಸಮುದಾಯಗಳನ್ನು ಒಗ್ಗೂಡಿಸಿ, ಬಸವಣ್ಣನವರ ದಾರಿಯನ್ನು ಆಯ್ದುಕೊಂಡು ಚಳವಳಿಗಳನ್ನು ರೂಪಿಸಿದರು. ನಿಜವಾದ ಕರ್ನಾಟಕದ ಮಾದರಿ ಅರಸು ಅವರಲ್ಲಿದೆ ಎಂದು ಬಣ್ಣಿಸಿದ ಮುಸ್ತಫ ಅವರು ಅರಸು ಅವರು ನಡೆದುಬಂದ ಹಾದಿಯನ್ನು ವಿವರಿಸಿದರು. ತಮ್ಮ ರಾಜಕೀಯ ಭವಿಷ್ಯದಲ್ಲಿ ಹಲವು ಏಳುಬೀಳುಗಳನ್ನು ಕಂಡ ಅರಸು ಅವರು ತಮ್ಮ ಆಸ್ತಿಯನ್ನೆ ಮನೆಯ ಕೆಲಸದಾತನಿಗೆ ನೀಡುವ ಮೂಲಕ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅರಸು ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ, ಜೀತಮುಕ್ತಿ ಕಾಯ್ದೆ, ಋಣಪರಿಹಾರ ಕಾಯ್ದೆಯಂತಹ ಕ್ರಾಂತಿಕಾರಿ ನಿರ್ಧಾರಗಳು ಬಡವರು, ತಳಸಮುದಾಯದವರು, ಕೃಷಿ ಕಾರ್ಮಿಕರು ಸ್ವಾಭಿಮಾನದ ಬದುಕು ಸಾಧಿಸಲು ನೆರವಾದವು. ರಾಜ್ಯದ ಅಸಂಖ್ಯಾತ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು. ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದು, ಅಂದಿನ ಮಟ್ಟಿಗೆ ವಿನೂತನವೆನಿಸಿದ್ದ ತೀರ್ಮಾನವಾಗಿತ್ತು. ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಮಹಾನ್ ನಾಯಕ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆದು ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಸ್ತಫ ಹೇಳಿದರು. ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ ಅವರು ಮಾತನಾಡಿ, ದಿವಗಂತ ಡಿ.ದೇವರಾಜು ಅರಸು ಹಾಗೂ ತಮ್ಮ ತಂದೆಯೊಂದಿಗಿನ ಒಡನಾಟವನ್ನು ಬಣ್ಣಿಸಿದರು. ವಕೀಲ ಕುಞಬ್ದುಲ್ಲಾ ಮಾತನಾಡಿ, ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತಂದಾಗ ಮಾತ್ರ ಎಲ್ಲರೂ ದೇಶವನ್ನು ಆಳುವ ದೊರೆಗಳಾಗಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸಂಘಟನೆಯ ಮುಖಂಡರುಗಳನ್ನು ಒಗ್ಗೂಡಿಸಿ ಅಹಿಂದವನ್ನು ಬಲಪಡಿಸಬೇಕು ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೆಚ್.ಎಲ್.ದಿವಾಕರ್, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಸರ್ಕಾರಿ ನೋಟರಿ ಹಾಗೂ ವಕೀಲರಾದ ಬಿ.ಇ.ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಪ್ರತಿ ಗ್ರಾಮಗಳಿಗೆ ತೆರಳಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಅಹಿಂದ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಬೇಕು, ಆ ಮೂಲಕ ಜಿಲ್ಲೆಯಲ್ಲಿ ಅಹಿಂದ ಒಕ್ಕೂಟ ದೊಡ್ಡ ಶಕ್ತಿಯಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮನ್ ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು. ಸಹಮತ ವೇದಿಕೆಯ ರೇವತಿ ರಮೇಶ್ ಸ್ವಾಗತಿಸಿ, ಎಸ್.ಐ.ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು. ಪ್ರೇಮ, ವೀಣಾಕ್ಷಿ, ಪ್ರೇಮ ಕೃಷ್ಣಪ್ಪ, ಮುಬಿನಾ, ವಾಸುದೇವ್, ಶಬರೀಶ್ ಸನ್ಮಾನಿತರ ಪರಿಚಯ ಮಾಡಿದರು.
::: ಸನ್ಮಾನಿತರು :::
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಹಾಗೂ ನಿವೃತ್ತ ಶಿಕ್ಷಕ ಎನ್.ವೀರಭದ್ರಯ್ಯ, ಸಮಾಜ ಸೇವಕ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ರಕ್ತದಾನಿ ಹಾಗೂ ಭಾಗಮಂಡಲ ಪೊಲೀಸ್ ಇಲಾಖೆಯ ಹೆಡ್‌ಕಾನ್ಸ್ಟೇಬಲ್ ಬಿ.ಎಂ.ರಾಮಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ನಗರಯೋಜನಾ ಪ್ರಧಿಕಾರದ ಅಧ್ಯಕ್ಷ ಕೆ.ಎ.ಆದಂ, ಸಮಾಜ ಸೇವಕ ಹಾಗೂ ವಕೀಲರಾದ ಕೆ.ವಿ.ಸುನಿಲ್, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ ಮತ್ತು ಎಸ್.ಎಸ್.ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಾದ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ (ಪರವಾಗಿ ಸಹೋದರಿ), ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆ.ಆರ್.ಬಬಿತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.