ಚಿಕ್ಕಮಗಳೂರು NEWS DESK ಆ.21 : ತರೀಕೆರೆ ತಾಲೂಕಿನ ರೈತರ ಹಿತರಕ್ಷಣ ಸಮಿತಿಯ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಇಂದು ಭಾಗವಹಿಸಿ ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ಖಂಡಿಸಿ ಮಾತನಾಡಿದ ಚಂದ್ರು “ಅನೇಕ ದಶಕಗಳಿಂದ ಅರಣ್ಯ ಇಲಾಖೆಯ ಜಮೀನುಗಳಲ್ಲಿ ಕೃಷಿ ಕಾರ್ಯವನ್ನು ಮಾಡುತ್ತಿರುವ ಸಣ್ಣ ಸಣ್ಣ ಹಿಡುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲವೆಂದು ರಾಮನಗರ ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ರೀತಿಯ ಆದೇಶವನ್ನು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಯಾಕೆ ಮಾಡುತ್ತಿಲ್ಲ ” ಎಂದು ಪ್ರಶ್ನಿಸಿದರು. ” ಈ ಬಗ್ಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಅರಣ್ಯ ಸಚಿವ ಖಂಡ್ರೆ ಅವರ ಬಳಿ ಮಾತನಾಡುತ್ತೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೂ ಮಾತನಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಮುಂದಾಗುತ್ತೇನೆ” ಎಂದು ರೈತರಿಗೆ ಆಶ್ವಾಸನೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು ಹಾಗೂ ಆಮ್ ಆದ್ಮಿಪಕ್ಷದ ಮುಖಂಡರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.