
ಗೋಣಿಕೊಪ್ಪ ಆ.20 NEWS DESK : ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಸಮವಸ್ತ್ರವನ್ನು ವಿತರಿಸಲಾಯಿತು. ಶಾಲೆಯ ವಿವೇಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಕರ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಶಿಕ್ಷಕರು ಸಿದ್ಧಪಡಿಸಿದ ಹೊಸ ಬಣ್ಣದ ಸಮವಸ್ತ್ರವನ್ನು ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪ್ರಮೋದ್ ಕಾಮತ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಪ್ರಮೋದ್ ಕಾಮತ್, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಪ್ರೇರಣೆ ಹೆಚ್ಚಿಸಲು ಸಮವಸ್ತ್ರವೂ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಎಸ್‌ಡಿಎಂಸಿ ಸಮಿತಿ ಹಾಗೂ ಶಿಕ್ಷಕರು ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ. ಹಳದಿ ಬಣ್ಣದ ಸಮವಸ್ತ್ರವು ಮಕ್ಕಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ಕೈಗೊಂಡಿರುವ ಈ ವಿನೂತನ ಪ್ರಯತ್ನ ಮೆಚ್ಚುವಂತದ್ದು ಎಂದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಏಕತಾ ಮನೋಭಾವ ಬೆಳೆಸುವ ಉದ್ದೇಶದಿಂದ ಹೊಸ ಬಣ್ಣದ ಸಮವಸ್ತ್ರವನ್ನು ವಾರದಲ್ಲಿ ಎರಡು ದಿನ ಧರಿಸುವಂತೆ ಪರಿಚಯಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹೊಸ ಹುರುಪು ಮೂಡುವುದರೊಂದಿಗೆ ಅವರು ಅಚ್ಚುಕಟ್ಟಾಗಿ ಕಾಣಿಸಿಕೊಳ್ಳಲು ಸಹಕಾರಿಯಾಗಲಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ವಿಶಿಷ್ಟ ಗುರುತನ್ನು ನೀಡುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕತೆಯ ಮನೋಭಾವ ಬೆಳೆಸುವುದು ಅತ್ಯಂತ ಮುಖ್ಯ. ಸರ್ಕಾರದಿಂದ ಸಮವಸ್ತ್ರ ನೀಡಲಾಗುತ್ತಿದ್ದರೂ, ಅದರ ಜೊತೆಗೆ ವಾರದಲ್ಲಿ ಎರಡು ದಿನ ವಿದ್ಯಾರ್ಥಿಗಳು ತಮ್ಮದೇ ಆದ ವಿಶೇಷ ಬಣ್ಣದ ಸಮವಸ್ತ್ರ ಧರಿಸುವ ಅವಕಾಶ ಕಲ್ಪಿಸಲಾಗಿದೆ. ಪೋಷಕರ ಸಹಕಾರದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರತಿ ವಿದ್ಯಾರ್ಥಿಯೂ ಬುಧವಾರ ಹಾಗೂ ಶನಿವಾರ ವಿಶೇಷ ಸಮವಸ್ತ್ರ ಧರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಕೂಡ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಣಿಕಂಠ, ಹಿರಿಯ ಶಿಕ್ಷಕರಾದ ದಮಯಂತಿ, ಇಂದಿರಾ ಹಾಗೂ ಅನಿತಾಕುಮಾರಿ ಉಪಸ್ಥಿತರಿದ್ದರು.









