ಮಡಿಕೇರಿ NEWS DESK ಆ.22 : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಬ್ಬರ್ ತೋಟಕ್ಕೆ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸಂಪಾಜೆ ಗ್ರಾಮದ ದೊಡ್ಡಡ್ಕ ಬಳಿ ನಡೆದಿದೆ. ವಿರಾಜಪೇಟೆ ಪೆರುಂಬಾಡಿ ನಿವಾಸಿ, ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗಣೇಶ್(64) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಗಣೇಶ್ ಅವರು ತಮ್ಮ ಪುತ್ರನನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಿಟ್ಟು ಹಿಂತಿರುಗಿ ಬರುತ್ತಿದ್ದ ಸಂದರ್ಭ ಸಂಪಾಜೆ ದೊಡ್ಡಡ್ಕ ಬಳಿ ಕಾರು ಅಪಘಾತಕ್ಕೀಡಾಗಿದೆ. ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದ ಗಣೇಶ್ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಗಣೇಶ್ ಅವರ ಪುತ್ರಿ, ಅಳಿಯ ಹಾಗೂ ಮರ್ತೋವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಣೇಶ್ ಅವರು ವಿರಾಜಪೇಟೆ ಕರ್ನಾಟಕ ಸಂಘದ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು.