ಮಡಿಕೇರಿ NEWS DESK ಆ.23 : ಹಾಡಹಗಲೇ ಚೇರಂಬಾಣೆ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರನ್ನು ಬೆದರಿಸಿ ಚಿನ್ನಾಭರಣಗಳನ್ನು ದರೋಡೆ ಮಾಡಿದ ಆರೋಪಿಯನ್ನು ಪ್ರಕರಣ ನಡೆದ ಕೇವಲ 6 ಗಂಟೆಗಳಲ್ಲಿ ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ, ಭಾಗಮಂಡಲ ಮತ್ತು ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಚೇರಂಬಾಣೆ ನಿವಾಸಿ ಸುದರ್ಶನ್ (24) ಎಂಬಾತನೇ ಬಂಧಿತ ಆರೋಪಿ. ಸಣ್ಣಪಲಿಕೋಟು ಬಸ್ ನಿಲ್ದಾಣದ ಬಳಿ ಈತನನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ 60 ಗ್ರಾಂ 530 ಮಿಲಿ ಚಿನ್ನಾಭರಣ, ರೂ.620 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
::: ಪ್ರಕರಣದ ಹಿನ್ನೆಲೆ :::
ಆ.22 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂಬಾಣೆ ಗ್ರಾಮದ ನಿವಾಸಿ ಗೋಪಾಲಕೃಷ್ಣ ಕೆ.ಕೆ ಅವರ ತಾಯಿ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಬೆಳಿಗ್ಗೆ ಸುಮಾರು 11.30 ಗಂಟೆಗೆ ಆರೋಪಿ ಮನೆಗೆ ನುಗ್ಗಿದ್ದಾನೆ. ಚಾಕು ತೋರಿಸಿ, ಬೆದರಿಸಿ, ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಮನೆಯ ಗಾಡ್ರೇಜ್‌ನಲ್ಲಿದ್ದ ಚಿನಾಭರಣಗಳನ್ನು ದೋಚಿದ್ದಾನೆ ಎಂದು ಭಾಗಮಂಡಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಡಿವೈಎಸ್‌ಪಿ ಮಹೇಶ್ ಕುಮಾರ್, ಗ್ರಾಮಾಂತರ ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‌ಐ ಶೋಭಾ ಲಮಾಣಿ, ನಾಪೋಕ್ಲು ಪಿಎಸ್‌ಐ ಮಂಜುನಾಥ.ಈ, ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.