ಮಡಿಕೇರಿ ಆ.30 NEWS DESK : ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಹಿಂದುತ್ವವನ್ನು ಉಳಿಸಿ ಬೆಳೆಸಲು ಹೋರಾಡುತ್ತಿವೆಯಾದರೂ ಇವುಗಳೊಂದಿಗೆ ಹಿಂದೂಗಳು ಕೂಡ ಹಿಂದುತ್ವದ ರಕ್ಷಣೆಗಾಗಿ ಒಗ್ಗಟ್ಟಾಗಬೇಕೆಂದು ಉಕ್ಕುಡ ರಾಜರಾಜೇಶ್ವರಿ ಕ್ಷೇತ್ರದ ಧರ್ಮದರ್ಶಿ ಹೆಚ್.ಎನ್.ಗೋವಿಂದಸ್ವಾಮಿ ಕರೆ ನೀಡಿದರು. ವಿಶ್ವ ಹಿಂದೂ ಪರಿಷತ್ ಮಡಿಕೇರಿ ಪ್ರಖಂಡದ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ಕೊಡುವುದರಿಂದ ಪ್ರತಿಯೊಬ್ಬರೂ ಬೆಳಣಿಗೆ ಹೊಂದಲು ಸಾಧ್ಯ. ದೇವರ ಬಗ್ಗೆ ಹೆಚ್ಚಿನ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದಾಗಿ ಕೋಪ ಕ್ರೌರ್ಯಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಗೋವಿಂದಸ್ವಾಮಿ ಸಲಹೆ ನೀಡಿದರು. ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕು. ಧರ್ಮಕ್ಕೆ ಧಕ್ಕೆಯಾದಾಗ ಎಲ್ಲರೂ ಒಗ್ಗಾಟ್ಟಾಗಬೇಕು, ಎಲ್ಲಾ ವರ್ಗದವರನ್ನು ಒಟ್ಟುಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಸನಾತನ ಧರ್ಮ ಎಂಬ ಪದಕ್ಕೆ ನಿಜವಾದ ಅರ್ಥ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಮಾತನಾಡಿ, ಎಂತಹ ಸಂದರ್ಭದಲ್ಲೂ ಕೂಡ ನಮ್ಮ ಧರ್ಮವನ್ನು, ನಮ್ಮ ತನವನ್ನು ನಾವು ಬಿಟ್ಟುಕೊಡಬಾರದು ಎಂದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಡಿ.ನರಸಿಂಹ ಮಾತನಾಡಿ, ಹಿಂದುತ್ವದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಹಿಂದೂ ಧರ್ಮವನ್ನು ರಕ್ಷಿಸುವುದು ಕೇವಲ ಹಿಂದೂ ಸಂಘಟನೆಗಳ ಕೆಲಸ ಎಂಬ ಮನೋಭವನೆಯನ್ನು ಬಿಟ್ಟು, ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದರು. ಜಿಲ್ಲಾ ಬೌದ್ಧಿಕ ಪ್ರಮುಖ್ ಚಿ.ನಾ.ಸೋಮವೇಶ್ ಪ್ರಾಸ್ತಾವಿಕ ಮಾತನಾಡಿ, ಕೊಡಗಿನಲ್ಲಿ ವಿ.ಹಿಂ.ಪ ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಹಿಂ.ಪ ಮಡಿಕೇರಿ ನಗರ ಪ್ರಖಂಡದ ಅಧ್ಯಕ್ಷ ಕೆ.ಎನ್.ಗುರುಪ್ರಸಾದ್ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕೆಂದರು. ಸೋಮೇಶ್ ಅವರು ಬರೆದ ‘ಭಗವಂತನ ಬೆಳಕು ಭಾರತ’ ಪುಸ್ತಕವನ್ನು ಜಿ.ರಾಜೇಂದ್ರ ಅವರು ಅನಾವರಣಗೊಳಿಸಿದರು. ಓಂಕಾರ ರಾಮನಾಮ ಸ್ಮರಣೆ, ಪರಿಷತ್ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣ್ಯರು ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪನಮ ಗೈದರು. ವಿ.ಹಿಂ.ಪ ಮಾತೃಶಕ್ತಿ ಪದಾಧಿಕಾರಿ ಪೂರ್ಣಿಮ ಸುರೇಶ್ ನಿರೂಪಿಸಿ, ಜಿಲ್ಲಾ ಕಾರ್ಯದಶಿ ರಮೇಶ್ ಸ್ವಾಗತಿಸಿದರು. ಸಹಾ ಕಾರ್ಯದರ್ಶಿ ಸಂತೋಷ್ ವಂದಿಸಿದರು.