ಸೋಮವಾರಪೇಟೆ ಆ.30 NEWS DESK : ಸತ್ಯ, ನ್ಯಾಯ, ಧರ್ಮ ಪರಿಪಾಲನೆಯ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಮಾಜವೇ ಗೌರವಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂಂದ ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಸಮಾಜಕ್ಕೆ ಸೇವೆ ಮತ್ತು ಪರಿವರ್ತನೆ ಮೂಲಕ ಉತ್ತಮ ಸಂದೇಶವನ್ನು ನೀಡುವುದರೊಂದಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಹಾಯಹಸ್ತವನ್ನು ನೀಡಿದೆ ಎಂದರು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ಇಂದು ಯಾವುದೇ ಸರ್ಕಾರಗಳು ಮಾಡದ ಕೆಲವೊಂದು ಯೋಜನೆಗಳನ್ನು ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಅದರಲ್ಲೂ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ಸ್ತ್ರೀ ಶಕ್ತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು. ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾಭವನ ಟ್ರಸ್ಟ್ನ ಅಧ್ಯಕ್ಷ ಎಸ್.ಮಹೇಶ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಹೆಚ್.ರೋಹಿತ್ ಮಾತನಾಡಿದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಸೋಮೇಶ್, ಸುರೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಉಮೇಶ್ ಹಾಜರಿದ್ದರು. ಇದೇ ಸಂದರ್ಭ ಬಜೆಗುಂಡಿ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಯೋಜನೆ ವತಿಯಿಂದ 2,50,000 ರೂ.ಗಳನ್ನು ಪೂರಕ ಸಹಾಯಧನ ಮಂಜೂರು ಮಾಡಲಾಯಿತು.