ಕುಶಾಲನಗರ ಸೆ.4 NEWS DESK : ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಜನರು ಪಿಓಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ರಾಸಾಯನಿಕ ಬಣ್ಣ ಮುಕ್ತ ಪರಿಸರ ಸ್ನೇಹಿ, ನೈಸರ್ಗಿಕವಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮ ಕುಮಾರ್ ಮನವಿ ಮಾಡಿದರು. ಸೆ.6 ಮತ್ತು 7 ರಂದು ನಡೆಯಲಿರುವ ಗೌರಿ-ಗಣೇಶೋತ್ಸವ ಆಚರಣೆ ಅಂಗವಾಗಿ ‘ನಮ್ಮ ನಡೆ ಹಸಿರೆಡೆಗೆ’ ಅಭಿಯಾನದಡಿ ‘(ಗೋ ಗ್ರೀನ್ ಕ್ಯಾಂಪೈನ್) ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ-2024 ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿಯ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ. ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರುಪಡೆ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.), ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪರಿಸರ ಜನಜಾಗೃತಿ ಆಂದೋಲನದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದರು. ಗಣೇಶೋತ್ಸವ ಸಂದರ್ಭದಲ್ಲಿ ಪಿಓಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾಲಿನ್ಯಕಾರಿ ರಾಸಾಯನಿಕ ಬಣ್ಣ ಬಳಸಿ ತಯಾರು ಮಾಡಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸದೆ “ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಮಾಲಿನ್ಯ ತಡೆಗಟ್ಟಿ ಸುಸ್ಥಿರ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು. ನಾವೆಲ್ಲರೂ ಪರಿಸರಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಹಾಗೂ ನೈಸರ್ಗಿಕವಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸುವ ಮೂಲಕ ಮಾಲಿನ್ಯ ತಡೆಗಟ್ಟಲು ಶಾಲೆಗಳ ಇಕೋ ಕ್ಲಬ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ಟಿ.ಜಿ.ಪ್ರೇಮಕುಮಾರ್ ತಿಳಿಸಿದರು. ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ನದಿ, ಕೆರೆ ಮತ್ತಿತರ ಜಲಮೂಲಗಳಿಗೆ ವಿಸರ್ಜಿಸುವುದರಿಂದ ಜಲಚರಗಳು ಸೇರಿದಂತೆ ಜಲ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟುವ ದಿಸೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ”. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಶಾಲೆಯ ಶಿಕ್ಷಕ ಕೆ.ಗೋಪಾಲಕೃಷ್ಣ ಮತ್ತು ಬಿ.ಎಸ್.ಅನ್ಸಿಲಾ ರೇಖಾ ಮಕ್ಕಳಿಗೆ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಗೆ ಸಹಕರಿಸಿದರು. ಶಾಲಾ ನಾಯಕ ಗೌತಮ್, ಶಿಕ್ಷಕರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. ನಂತರ ಕೂಡ್ಲೂರು ಗ್ರಾಮದಲ್ಲಿ ಪರಿಸರ ಜಾಥಾ ನಡೆಸಿದ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಲು ಜನಜಾಗೃತಿ ಮೂಡಿಸಿದರು. ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮಾಲಿನ್ಯ ತಡೆಯಿರಿ, ಬೇಡ ಬೇಡ ಪಿ.ಓ.ಪಿ.ಗಣೇಶ ಮತ್ತು ರಾಸಾಯನಿಕ ಬಣ್ಣದ ಗಣೇಶ ಮೂರ್ತಿ ಬಳಕೆ ಬೇಡ, ಮಣ್ಣಿನ ಗಣೇಶ ಬಳಸಿ- ಜಲಮಾಲಿನ್ಯ ತಡೆಯಿರಿ ಇತ್ಯಾದಿ ಪರಿಸರ ಸ್ನೇಹಿ ಘೋಷಣೆಗಳನ್ನು ಕೂಗುವ ಮೂಲಕ ಗ್ರಾಮಸ್ಥರಲ್ಲಿ ಪರಿಸರ ಜಾಗೃತಿ ಮೂಡಿಸಿದರು.