ಸಿದ್ದಾಪುರ ಆ.6 NEWS DESK : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿದ್ದಾಪುರ ಪ್ರೌಢಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲಸಿ, ನಿವೃತ್ತರಾಗಿರುವ ಕೃಷ್ಣವೇಣಿ ಮತ್ತು ವೇಣುಗೋಪಾಲ್ ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ ಶಿಕ್ಷಕಿ ಕೃಷ್ಣವೇಣಿ, ಗುರುಶ್ರೇಷ್ಠರಾದ ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದು, ತಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿವೃತ ಬದುಕಿನಲ್ಲಿ ಸಂತೋಷ ತಂದಿದೆ ಎಂದರು. ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಜೀವನದ ಅಮೂಲ್ಯವಾದ ಸಂಪತ್ತು ವಿದ್ಯೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ತಪ್ಪುಗಳನ್ನು ತಿದ್ದಿ, ಉತ್ತಮ ಭವಿಷ್ಯದೆಡೆಗೆ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಬೇಕು. ನೂರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಶಿಕ್ಷಕರಿಗೆ ಗೌರವ ನೀಡಬೇಕು ಎಂದರು. ಈ ಸಂದರ್ಭ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್.ಮುಸ್ತಫ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸದಸ್ಯರಾದ ಎ.ಎನ್.ವಾಸು, ಸುಬ್ರಮಣಿ, ಆಂಟೋನಿ, ಕೃಷ್ಣ ಹಾಜರಿದ್ದರು.