ನಾಪೋಕ್ಲು ಸೆ.9 NEWS DESK : ನಾಪೋಕ್ಲುವಿನ ಮೇರಿ ಮಾತೆಯ ದೇವಾಲಯದಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಸಲುವಾಗಿ ದೇವಾಲಯದ ಆವರಣದಲ್ಲಿ ಮೇರಿಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವ ದಿನದ ನೋವೆನ ಪ್ರಾರ್ಥನೆ ನೆರವೇರಿಸಿ ಹಾಡಿನೊಂದಿಗೆ ಸಮುದಾಯ ಬಾಂಧವರು ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ಧರ್ಮ ಗುರುಗಳಾದ ಜ್ಞಾನ್ ಪ್ರಕಾಶ್ ಮಾತನಾಡಿ, ನಮ್ಮ ಬದುಕನ್ನು ಪರಿಪೂರ್ಣತೆಯಲ್ಲಿ ರೂಪಿಸಿಕೊಳ್ಳಬೇಕು. ಕ್ರಿಸ್ತನ ಹಿಂಬಾಲಕರಾದ ನಮಗೆ ಒಂದು ಗುರಿ ಇರಬೇಕು. ಪ್ರಾರ್ಥನೆ ದಾನ, ಧರ್ಮ, ಬೇರೆಯವರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಸಂತರ ಪುಸ್ತಕಗಳನ್ನು ಓದಿ ಅವರ ಪ್ರೇರಣೆ ಪಡೆದು ಬದುಕಬೇಕು ಎಂದರು. ಈ ಸಂದರ್ಭ ಕ್ರೈಸ್ತ ಭಕ್ತಾದಿಗಳು , ಪಾಲನಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.