
ಸುಂಟಿಕೊಪ್ಪ ಸೆ.10 NEWS DESK : ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಂಘದ ಗೌರಿ ಗಣೇಶ ಮೂರ್ತಿಯನ್ನು ಕೊಡಗರಹಳ್ಳಿ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಭವ್ಯ ಶೋಭಯಾತ್ರೆ ನಡೆಸಿ ನಂತರ ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು. ಸುತ್ತಮುತ್ತಲಿನ ನೂರಾರು ಮಂದಿ ಮಳೆಯ ನಡುವೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಸೌಹಾರ್ದ ಸಾರಿದ ಮುಸ್ಲಿಂ ಕುಟುಂಬ : ಕೊಡಗರಹಳ್ಳಿಯ ಬೈತೂರಪ್ಪ ದೇವಾಲಯದ ಬಳಿಯ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯ ವೇಳೆ ಸ್ಥಳೀಯ ರಫೀಕ್ ಮತ್ತು ಇಬ್ರಾಹಿಂ ಕುಟುಂಬಸ್ಥರು ಹಿಂದೂಗಳಿಗೆ ಸಿಹಿ ಮತ್ತು ತಂಪು ಪಾನೀಯ ಹಂಚಿ ಸೌಹಾರ್ದತೆ ಮೆರೆದರು. ಮಾದಾಪುರ ರಸ್ತೆಯಲ್ಲಿರುವ ವೃಕ್ಷೋಧ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಪಿಸಿದ್ದ ಗೌರಿ ಗಣೇಶ ಮೂರ್ತಿಗೆ ಮಹಾಪೂಜೆ ನೆರವೇರಿಸಿ ನಂತರ ಹರದೂರು ಹೊಳೆಯಲ್ಲಿ ವಿಸರ್ಜಿಸಲಾಯಿತು.
ಚಿಣ್ಣರಿಂದ ಗಣೇಶ ಮೂರ್ತಿಯ ವಿಸರ್ಜನೆ : ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ಪುಟಾಣಿ ಮಕ್ಕಳು ಸ್ಥಳೀಯ ಯುವಕರ ಮತ್ತು ನಿವಾಸಿಗಳ ನೆರವಿನಿಂದ ನಾಡ ಕಚೇರಿ ರಸ್ತೆಯಲ್ಲಿ(ಕಂದಾಯ ಇಲಾಖೆಯ ವಸತಿ ಗೃಹಗಳ ಪಕ್ಕ) ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವವನ್ನು ಸಂಭ್ರಮಿಸಿದರು. ಸಂಜೆ ಪೂಜಾ ವಿಧಿ ವಿಧಾನಗಳು ನೆರವೇರಿಸಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಿ ಪಟಾಕಿ ಸಿಡಿಸಿ ಹರದೂರು ಹೊಳೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಿದರು. ಈ ಪುಟ್ಟ ಮಕ್ಕಳು ಕೂಡ ಸಮಿತಿ ರಚಿಸಿ, ಪದಾಧಿಕಾರಿಗಳ ಆಯ್ಕೆ ಮೂಲಕ ಗಣೇಶೋತ್ಸವ ಆಚರಿಸಿದ್ದು ವಿಶೇಷ ಎನಿಸಿತು.








