


ಮಡಿಕೇರಿ NEWS DESK ಸೆ.12 : ಪ್ರಜಾಪ್ರಭುತ್ವ ಬಲಪಡಿಸಲು ಸಾಕ್ಷರತೆ ಒಂದು ಪ್ರಮುಖ ಸಾಧನವಾಗಿದೆ ಎಂದು ಕೂಡಿಗೆಯ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಎಂ.ಚಂದ್ರಕಾಂತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಮತ್ತು ಸಪ್ತಾಹವನ್ನು ಜಿಲ್ಲಾ ವಯಸ್ಕರ ಶಿಕ್ಷಣ ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಗುರುವಾರ ಆಚರಿಸಲಾಯಿತು. ಸಾಕ್ಷರತೆಯ ಮಹತ್ವ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಆದ್ದರಿಂದ ಪ್ರತೀ ವರ್ಷ ವಿಶ್ವ ಸಾಕ್ಷರತಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
‘ಆಲೋಚನೆಗಳು ಮತ್ತು ಭಾವನೆಗಳನ್ನು ಓದುವ ಮತ್ತು ಬರವಣಿಗೆ ಮೂಲಕ ತಿಳಿಸಲು ಸಾಕ್ಷರತೆ ಅತ್ಯವಶ್ಯಕವಾಗಿದೆ. ಸಾಮಾಜಿಕ ಮತ್ತು ಮಾನವೀಕ ಅಭಿವೃದ್ಧಿಗೆ ಸಾಕ್ಷರತೆ ಒಂದು ಶಕ್ತಿಯಾಗಿದೆ ಎಂದು ಎಂ.ಚಂದ್ರಕಾಂತ್ಅವರು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರೂ ಸಾಮಾಜಿಕ, ಆರ್ಥಿಕ ಹಾಗೂ ವೈಯಕ್ತಿಕವಾಗಿ ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಎಂ.ಚಂದ್ರಕಾಂತ್ ಅವರು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್‌ಪಿ ಮಹೇಶ್ ಕುಮಾರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಚ್.ಟಿ.ಶಶಿಕಲಾ, ಕೃಷ್ಣಪ್ಪ ಇತರರು ಇದ್ದರು. ಸಾಕ್ಷರತಾ ಗೀತೆ ಹಾಗೂ ಸಾಕ್ಷರತಾ ನಾಟಕವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನವ ಸಾಕ್ಷರರನ್ನು ಸನ್ಮಾನಿಸಲಾಯಿತು.









