
ಮಡಿಕೇರಿ ಸೆ.13 NEWS DESK : ವಿರಾಜಪೇಟೆ ಪಟ್ಟಣದಲ್ಲಿ ನಡೆಯಲಿರುವ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ.17 ರಂದು ಅಪರಾಹ್ನ 2 ಗಂಟೆಯಿಂದ ಸೆ.18 ಬೆಳಿಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ತಾತ್ಕಾಲಿಕ ವಾಹನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಪೆರಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ವಿರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಛೇರಿಯ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಬದಿಯಲ್ಲಿ ಮಾತ್ರ ನಿಲ್ಲಿಸುವುದು. ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗಳಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್ ಪೋಸ್ಟ್-ಬಾಳುಗೋಡು-ಬಿಟ್ಟಂಗಾಲ ಜಂಕ್ಷನ್-ಕೈಕೇರಿ ಜಂಕ್ಷನ್-ಸಿ.ಎಂ. ಪೂಣಚ್ಚನವರ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ಹೋಗುವುದು. ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ-ಬಿಟ್ಟಂಗಾಲ- ಬಾಳುಗೋಡು – ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವುದು. ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ-ಪಾಲಿಬೆಟ್ಟ-ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ-ಮಾಕುಟ್ಟ ಮಾರ್ಗವಾಗಿ ಹೋಗುವುದು. ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣೆಕೊಪ್ಪ-ಮೈಸೂರು, ಬೆಂಗಳೂರಿಗೆ ಹೋಗುವುದು. ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವಿರಾಜಪೇಟೆಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಛೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು. ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡುವುದು. ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದು. ಮೈಸೂರು-ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಹೋಗುವುದು. ಸೆಪ್ಟೆಂಬರ್, 17 ರಂದು ಮಧ್ಯಾಹ್ನ 02 ಗಂಟೆಯಿಂದ ಸೆಪ್ಟೆಂಬರ್, 18 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವಿರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಛೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‍ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‍ವರೆಗೆ ಯಾವುದೇ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಈ ಮೇಲಿನ ಸಂಚಾರ ನಿಯಮಗಳಿಗೆ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾಯ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ, ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡುವ ನಿಬಂಧನೆಗಳಿಗೊಳಪಟ್ಟಿರುತ್ತದೆ. ಈ ವಾಹನ ಸಂಚಾರ ನಿಯಮವು ದಿನಾಂಕ 17-09-2024ರ ಅಪರಾಹ್ನ 2:00 ಗಂಟೆಯಿಂದ ದಿನಾಂಕ 18-09-2024ರ ಬೆಳಿಗ್ಗೆ 10:00 ಗಂಟೆಯವರೆಗೆ ಜಾರಿಯಲ್ಲಿದ್ದು, ಆನಂತರ ಎಂದಿನಂತೆ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.








