


ನಾಪೋಕ್ಲು ಸೆ.14 NEWS DESK : ಕೂವಲೆ ಪುಟ್ಟ್, ಮದ್ದ್ ಪುಟ್ಟ್, ಬಾಳೆನುರ್ಕ್, ಬಡವಕಜ್ಜಾಯ, ಕೇಂಬು ಕರಿ, ಕಾಡು ಮಾಂಗೆ ಕರಿ, ಕುರುಕರಿ, ಚಕ್ಕೆಕುರು ಪಜ್ಜಿ ಒಂದೇ ಎರಡೇ ಹತ್ತು ಹಲವು ಕೊಡವ ಜನಾಂಗದ ತಿಂಡಿ ತಿನಿಸುಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸಿದವು. ಕೈಲ್ ಪೊಳ್ದ್ ತೀನಿ ನಮ್ಮೆಯ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಾಪೋಕ್ಲು ಕೊಡವ ಸಮಾಜ ಸಾಕ್ಷಿಯಾಯಿತು. ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕೈಲ್ ಪೊಳ್ದ್ ತೀನಿ ನಮ್ಮೆ ಕಾರ್ಯಕ್ರಮವನ್ನು ಸಮಾಜ ಸೇವಕಿ ಕೇಟೋಳಿರ ಜಾಜಿ ಕುಟ್ಟಪ್ಪ ಮತ್ತು ಪೊಳ್ದ್ (ತೀನಿ) ತಿನಿಸುಗಳ ಪ್ರದರ್ಶನವನ್ನು ಸಮಾಜಸೇವಕಿ ಮಂಡೀರ ಸರೋಜ ದೇವಯ್ಯ ಉದ್ಘಾಟಿಸಿದರು. ನಾಪೋಕ್ಲು ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಮೇದುರ ವಿಶಾಲ ಕುಶಾಲಪ್ಪ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ ಎಂದರು. ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಜನಾಂಗ ರೂಡಿಸಿಕೊಳ್ಳಬೇಕು ಎಂದ ಅವರು ಸಮಾಜದ ಮಕ್ಕಳಿಗೆ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂಥದ್ದು ಪೋಷಕರ ಜವಾಬ್ದಾರಿ ಎಂದು ಹೇಳಿದರು. ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ ಹಬ್ಬ, ಹರಿದಿನ, ಆಚಾರ, ವಿಚಾರಗಳಲ್ಲಿ ಕೊಡವ ಭಾಷೆಯ ಬಳಕೆ ಹೆಚ್ಚು ಹೆಚ್ಚು ಆಗಬೇಕು. ಭಾಷೆ ಉಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ತೀನಿ ನಮ್ಮೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕೊಡವ ಮಹಿಳೆಯರು ಪಾಲ್ಗೊಳ್ಳಬೇಕೆಂದ ನಾಣಯ್ಯ ಈ ಕೂಟದಲ್ಲಿ ಪುರುಷರು ಕೂಡ ತಿಂಡಿ ತಿನಿಸು ತಯಾರಿಸಿ ಪಾಲ್ಗೊಳ್ಳುವಂತಾಗಲಿ ಎಂದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಕೊಡವ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಕದ್ದಣಿಯಂಡ ವಂದನಾ ಚಿಣ್ಣಪ್ಪ ವಿಚಾರ ಮಂಡಿಸಿದರು. ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮದ ಲೇಖಕಿ ಅಪ್ಪಚೆಟ್ಟೋಳಂಡ ವನು ವಸಂತ, ಮಡಿಕೇರಿಯ ಕೆ.ಎಸ್.ಒ.ಯು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ ಅವರುಗಳ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕೊಡವ ಸಮಾಜ ಮತ್ತು ಮೊಮ್ಮಕ್ಕಡ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಮೊಮ್ಮಕ್ಕಡ ಪರಿಷತ್ ನಿರ್ದೇಶಕಿಯರಾದ ಮಮತಾ ಪ್ರಾರ್ಥಿಸಿದರು, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು, ಕಲಿಯಂಡ ಗೀತಾ ವಂದಿಸಿದರು. ಮಳೆಗಾಲದ ಖಾದ್ಯಗಳಾದ ಸಾಂಬಾರು, ಚಟ್ನಿ, ಪಲ್ಯ ಸೇರಿದಂತೆ ನೂರಾರು ತಿನಿಸು ಘಮಘಮಿಸುತ್ತಿತ್ತು. ವಿವಿಧ ಕ್ರೀಡಾ ಕೂಟ ಸ್ಪರ್ಧೆ ಆಯೋಜಿಸಿದ ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ.








