

ಮಡಿಕೇರಿ NEWS DESK ಸೆ.14 : ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ವಕ್ಫ್ ಬಿಲ್-2024 ನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಂಡಿಸಿದರು. ಎಸ್‌ಡಿಪಿಐ ಮುಖಂಡ ಹಾಗೂ ನಗರಸಭಾ ಸದಸ್ಯ ಅಮಿನ್ ಮೊಹ್ಸಿನ್ ಮಾತನಾಡಿ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ವಕ್ಫ್ ಬಿಲ್ 2024 ನ್ನು ಜಾರಿಗೆ ತಂದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗಾಗಿ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಅಜೆಂಡವಾಗಿದೆ. ಹಾಲಿ ಇರುವ ವಕ್ಫ್ ಕಾಯ್ದೆಗೆ ಸುಮಾರು 40 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೆ ನಾಶಗೊಳಿಸಲು ಪ್ರಯತ್ನಿಸಲಾಗಿದೆ. ಇದು ಜಾತ್ಯಾತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಾಮ್ಯದಿಂದ ಕೂಡಿದೆ ಎಂದು ಆರೋಪಿಸಿದರು. ವಕ್ಫ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಹಿಂದೂಗಳಿಗೆ ವಕ್ಫ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದ ಕ್ರಮವಾಗಿದೆ ಎಂದು ಟೀಕಿಸಿದರು. ಜಂಟಿ ಪಾರ್ಲಿಮೆಂಟ್ ಸಮಿತಿ ಸೂಕ್ತ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸಬೇಕು ಮತ್ತು ವಕ್ಫ್ ಬಿಲ್-2024 ನ್ನು ಹಿಂಪಡೆಯಬೇಕು ಎಂದು ಅಮಿನ್ ಮೊಹ್ಸಿನ್ ಒತ್ತಾಯಿಸಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಮಡಿಕೇರಿ ನಗರಸಭೆಯ ಎಸ್‌ಡಿಪಿಐ ಸದಸ್ಯರುಗಳಾದ ಎಂ.ಕೆ.ಮನ್ಸೂರ್, ಮೇರಿ ವೇಗಸ್, ಬಷೀರ್ ಅಹಮ್ಮದ್, ಪಕ್ಷದ ಪ್ರಮುಖರಾದ ರಿಜ್ವಾನ್, ನಜೀರ್ ಅಹಮ್ಮದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








