ಮಡಿಕೇರಿ ಸೆ.17 NEWS DESK : ಸಂಕಷ್ಟದ ಬದುಕು ಸವೆಸುತ್ತಿರುವ ಜಿಲ್ಲಾ ವ್ಯಾಪ್ತಿಯ ದುಡಿಯುವ ವರ್ಗಕ್ಕೆ ನಿವೇಶನ ಅಥವಾ ವಸತಿ ಒದಗಿಸುವಲ್ಲಿ ಅಧಿಕಾರಕ್ಕೆ ಬಂದ ಪ್ರತಿ ಸರ್ಕಾರಗಳು ವಿಫಲವಾಗುತ್ತಿವೆ. ನಿವೇಶನ ರಹಿತರ ಕಡೆಗಣನೆಯನ್ನು ಖಂಡಿಸಿ ಸೆ.23 ರಂದು ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಮತ್ತು ಅ.3 ರಂದು ಸೋಮವಾರಪೇಟೆ ತಾಲ್ಲೂಕು ಕಚೇರಿಯ ಎದುರಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ, ಕಾರ್ಮಿಕ ಸಂಘಟನೆ ಎಐಟಿಯುಸಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ 2002 ರಿಂದ ನಿರಂತರವಾಗಿ ನಿವೇಶನಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಬಡ ಕೂಲಿ ಕಾರ್ಮಿಕ ಮಂದಿ ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಇಲ್ಲಿಯವರೆಗು ಸ್ಪಂದಿಸಿಲ್ಲವೆಂದು ಆರೋಪಿಸಿದರು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಲಭ್ಯವಿರುವ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗೆ ಒದಗಿಸಬೇಕೆಂದು ಈ ಹಿಂದೆ ಕೋರ್ಟ್ ಸೂಚಿಸಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಲಭ್ಯ ಸರ್ಕಾರಿ ಜಾಗವನ್ನು ಗುರುತಿಸುವ ಸಮರ್ಪಕ ಸರ್ವೇ ಕಾರ್ಯಗಳು ನಡೆದಿಲ್ಲ. ಉಳ್ಳವರು ಅತಿಕ್ರಮಿಸಿಕೊಂಡಿರುವ ಸರ್ಕಾರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಹಿಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತು. ಬಡವರ ಪರ ಎಂದು ಹೇಳಿಕೊಳ್ಳುತ್ತಿರುವ ಈಗಿನ ಕಾಂಗ್ರೆಸ್ ಸರ್ಕಾರ ಗುತ್ತಿಗೆ ನಿಯಮವನ್ನು ರದ್ದು ಮಾಡುವುದರ ಬದಲಾಗಿ ಉಳ್ಳವರ ಪರವಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದು ಅತ್ಯಂತ ಬೇಸರದ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಮರಳಿ ಪಡೆದು, ಅದನ್ನು ಶ್ರಮಿಕ ವರ್ಗದ ಮಂದಿಗೆ, ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕು ಸವೆಸುತ್ತಿರುವ ದುಡಿಯುವ ವರ್ಗಕ್ಕೆ ನೀಡುವಂತೆ ಸೋಮಪ್ಪ ಒತ್ತಾಯಿಸಿದರು. ಬಡ ಮಂದಿಗೆ ನಿವೇಶನಗಳನ್ನು ಒದಗಿಸುವುದು ಗ್ರಾಮ ಪಂಚಾಯ್ತಿಗಳ ಕರ್ತವ್ಯ ಮತ್ತು ಇದನ್ನು ಗ್ರಾಮ ಸಭೆಗಳಲ್ಲಿ ನಿರ್ಧರಿಸಬೇಕು ಎನ್ನಲಾಗುತ್ತದೆ. ಆದರೆ, ಪ್ರತಿ ಗ್ರಾಮಸಭೆಗಳಲ್ಲಿ ನಿವೇಶನ ಕುರಿತು ವಿಷಯ ಪ್ರಸ್ತಾಪವಾಗುತ್ತದೆ ಹೊರತು ಬಡವರಿಗೆ ನಿವೇಶನ ನೀಡುವ ಯಾವುದೇ ಕಾಳಜಿ ಕಂಡು ಬರುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಕೆಗೆ ಆಗಿಂದಾಗ್ಗೆ ಅಧಿಕಾರಿಗಳ ಬದಲಾವಣೆಯೂ ತೊಡಕಾಗಿ ಪರಿಣಮಿಸುತ್ತಿದೆ. ತಾಲ್ಲೂಕು, ಜಿಲ್ಲಾ ಕಚೇರಿಗಳಲ್ಲಿನ ಅಧಿಕಾರಿಗಳನ್ನು ಪದೇ ಪದೇ ಬದಲಿಸುವುದರಿಂದ ಯಾವುದೇ ಕೆಲಸ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿದರು. ಪ್ರಸ್ತುತ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ, ಇದೇ ಬಡ ವರ್ಗದ, ದಲಿತರ, ಶೋಷಿತ ಸಮೂಹದ ಮತಗಳಿಂದಲೆ ಅಧಿಕಾರಕ್ಕೆ ಬಂದಿದೆ. ಬಡ ಮಂದಿಯ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ, ಉಪವಾಸ ಮುಷ್ಕರಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
::: ಖಾಲಿ ಬಿದ್ದ ಮನೆಗಳು :::
ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡವರಿಗೆ ನಿರ್ಮಿಸಲಾಗಿರುವ ಆರು ನೂರಕ್ಕೂ ಹೆಚ್ಚಿನ ಮನೆಗಳಲ್ಲಿ ಬಹುತೇಕ ಮನೆಗಳು ಖಾಲಿ ಬಿದ್ದಿದ್ದು, ಮತ್ತೆ ಹಲವಷ್ಟು ಶಿಥಿಲವಾಗಿರುವುದಾಗಿ ಹೆಚ್.ಎಂ.ಸೋಮಪ್ಪ ಆರೋಪಿಸಿದರು.
ರಾಜ್ಯದಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿದ್ದ ಅವಧಿಯಲ್ಲಿ, ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಜಂಬೂರಿನಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಹಲವು ಮಂದಿ ತಮಗೆ ದೊರೆತ ಮನೆಗಳನ್ನು ಭೋಗ್ಯಕ್ಕೆ ಇತರರಿಗೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಬಹಳಷ್ಟು ಮನೆಗಳಲ್ಲಿ ಸಂತ್ರಸ್ತರು ವಾಸವಿಲ್ಲದೆ ಖಾಲಿ ಬಿದ್ದಿವೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಖಾಲಿ ಮನೆಗಳನ್ನು ನಿವೇಶನ ರಹಿತರಿಗೆ ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಸಿಪಿಐ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಹೆಚ್.ಡಿ.ರಮೇಶ್ ಮಾತನಾಡಿ, ನಿವೇಶನಕ್ಕಾಗಿ ಆಗ್ರಹಿಸಿ ಸೆ.23 ರಂದು ಪೊನ್ನಂಪೇಟೆಯ ಬಸ್ ನಿಲ್ದಾಣದಿಂದ ತಾಲ್ಲೂಕು ಪಂಚಾಯ್ತಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಧರಣಿ ಮುಷ್ಕರ ನಡೆಸಲಾಗುತ್ತದೆ ಎಂದರು. ಜಿಲ್ಲೆಯ ವಿವಿಧೆಡೆಗಳಲ್ಲಿ ಅಲ್ಪಸ್ಪಲ್ಪ ಸರ್ಕಾರಿ ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಶ್ರಮಿಕ ವರ್ಗದ ಮಂದಿಯನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಸುವ ಸರ್ಕಾರ, ಅದೇ ಮತ್ತೊಂದೆಡೆ ಉಳ್ಳವರಿಗೆ ಅನುಕೂಲ ಕಲ್ಪಿಸಲು ಜಾಗವನ್ನು ಗುತ್ತಿಗೆಗೆ ನೀಡುವ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿದರು. ತಾಲ್ಲೂಕು ಕಂದಾಯ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರುತ್ತಿದೆ. ಬಡ ಮಂದಿಯ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಸಿಪಿಐ ಕಾರ್ಯದರ್ಶಿ ಶಬಾನ, ಸಿಪಿಐ ಸದಸ್ಯ ಜೆ.ಎಂ.ಅಶೋಕ ಉಪಸ್ಥಿತರಿದ್ದರು.