ವಿರಾಜಪೇಟೆ ಸೆ.18 NEWS DESK : ವಿರಾಜಪೇಟೆ ಐತಿಹಾಸಿಕ ಶ್ರೀ ಗೌರಿ ಗಣೇಶ ವಿಸರ್ಜನೋತ್ಸವವು ಸಂಭ್ರಮದಿಂದ ನಡೆಯಿತು. ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಹೊತ್ತ ವಿದ್ಯುತ್ ಅಲಂಕೃತಗೊಂಡ 22 ಮಂಟಪಗಳ ಶೋಭಾಯಾತ್ರೆಯು ನಗರದ ಮುಖ್ಯ ಬೀದಿಯಲ್ಲಿ ಮಳೆಯ ನಡುವೆಯೂ ಮೆರವಣಿಗೆ ನಡೆಸಿ ಪವಿತ್ರ ಗೌರಿ ಕೆರೆಯಲ್ಲಿ ಬುಧವಾರ ಬೆಳಗ್ಗಿನ ಜಾವ ವಿಸರ್ಜಿಸಲಾಯಿತು. ಸೆ.7 ರಂದು ನಗರದ 22 ಸಮಿತಿಗಳ ಮೂಲಕ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನಿಗೆ 10 ದಿನಗಳ ಕಾಲ ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ ಸಲ್ಲಿಸಿ ಸೆ,17 ರಂದು ವಿದ್ಯುತ್ ದೀಪಾಲಂಕೃತ ಹೂವಿನ ಭವ್ಯ ಮಂಟಪದಲ್ಲಿ ವಿಶೇಷ ವಾಧ್ಯಗೋಷ್ಠಿಯೋಂದಿಗೆ ಮಂಟಪಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ನಗರದ ಶ್ರೀ ಗಣಪತಿ ದೇವಸ್ಥಾನ ಗಡಿಯಾರ ಕಂಬದ ಬಳಿ, ಜೈನರ ಬೀದಿ ಶ್ರೀ ಬಸವೇಶ್ವರ ದೇವಸ್ಥಾನ, ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ವಿನಾಯಕ ಯುವಕ ಭಕ್ತ ಮಂಡಳಿ ಅಂಗಾಳ ಪರಮೇಶ್ವರಿ ದೇವಸ್ಥಾನ, ವಿಜಯ ವಿನಾಯಕ ಉತ್ಸವ ಸಮಿತಿ ದಕ್ಕನಿಮೊಹಲ್ಲಾ, ಕಾವೇರಿ ಗಣೇಶ ಉತ್ಸವ ಸಮಿತಿ ಮೂರ್ನಾಡು ರಸ್ತೆ, ನೇತಾಜಿ ಉತ್ಸವ ಸಮಿತಿ ನೆಹರು ನಗರ, ಗಣಪತಿ ಸೇವಾ ಸಂಘ ಗಣಪತಿ ಬೀದಿ, ವಿನಾಯಕ ಸೇವಾ ಸಮಿತಿ ಪಂಜರುಪೇಟೆ, ಜಲದರ್ಶಿನಿ ವಿನಾಯಕ ಸೇವಾ ಸಮಿತಿ ಆಂಜನೇಯ ದೇವಸ್ಥಾನ ಚಿಕ್ಕಪೇಟೆ, ವಿಘ್ನೇಶ್ವರ ಉತ್ಸವ ಸಮಿತಿ ಕುಕ್ಲೂರು, ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ, ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಗಣಪತಿ ಸೇವಾ ಸಮಿತಿ ಗಾಂಧಿನಗರ, ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೇರಿ, ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಕೆ.ಬೋಯಿಕೇರಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಗೌರಿಕೆರೆ ಗಣಪತಿ ಸೇವಾ ಸಮಿತಿ ವಿರಾಜಪೇಟೆ, ವಿಘ್ನೇಶ್ವರ ಉತ್ಸವ ಸೇವಾ ಸಮಿತಿ ಪಟ್ಟಣ ಪಂಚಾಯಿತಿ, ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ವಿನಾಯಕ ಯುವ ಸಮಿತಿ ಶಿವಕೇರಿ, ಶ್ರೀ ಬಾಲಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯಸ್ವಾಮಿ ರಸ್ತೆ, ಒಟ್ಟು 22 ವಿದ್ಯುತ್ ಅಲಂಕೃತ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗೌರಿ ಗಣೇಶ ವಿಸರ್ಜನೆಗಾಗಿ ಪುರಸಭೆಯಿಂದ ಪವಿತ್ರ ಗೌರಿಕೆರೆಯನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಹಾಗೂ ತೆಪ್ಪದ ವ್ಯವಸ್ಥೆ ಮಾಡಲಾಗಿತ್ತು. ಮೂರ್ತಿಗಳನ್ನು ವಿಸರ್ಜನೆ ಮಾಡುವ ಗೌರಿ ಕೆರೆಯಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೆರವಣಿಗೆ ನಂತರ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ಒಂದೊಂದಾಗಿ ತೆಪ್ಪದಲ್ಲಿಟ್ಟು ನಂತರ ನುರಿತರು ಕೆರೆಯ ಮಧ್ಯ ಮೂರ್ತಿಯನ್ನು ತೆರಳಿ ವಿಸರ್ಜಿಸಿದರು. ಉತ್ಸವದ ಅಂಗವಾಗಿ ಹಲವು ಸಮಿತಿ ವತಿಯಿಂದ ಜನರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಸಾಂಪ್ರದಾಯಿಕ ಚಾಲನೆ :: ನಗರದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ 10001 ಈಡುಗಾಯಿ ಅರ್ಪಿಸಿ ಪುಷ್ಪಾಲಂಕೃತ ವಾಹನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಿಡಿಮದ್ದು ಸಿಡಿಸಿ ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡಲಾಯಿತು. ಗಣಪತಿ ದೇವಾಲಯದ ಗಣಪತಿಯ ಉತ್ಸವ ಮೂರ್ತಿಯನ್ನು ಹೊತ್ತ ವಾಹನವು ಸಂಪೂರ್ಣ ಹೂವಿನಿಂದ ಅಲಂಕೃತಗೊಂಡಿತ್ತು. ಉತ್ಸವ ಮೂರ್ತಿಯನ್ನು ಹೊತ್ತ ವಾಹನದ ಮುಂದೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭಜನೆ ಸಂಕೀರ್ತನ ಪ್ರದರ್ಶನಗೊಂಡು ಮೆರವಣಿಗೆಯುದ್ದಕ್ಕೂ ಭಜನೆ ತಂಡ ಸಾಥ್ ನೀಡಿತ್ತು. ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿ ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಪ್ರದೇಶ ಗೌರಿದೇವಿಗೆ ಪೂಜೆ ಸಲ್ಲಿಸಿತು. ಇದರ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆಯಿತು. ಎಲ್ಲಾ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಿದರೆ ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಇರುವ ಹಿನ್ನೆಲೆ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಕುಳ್ಳಿರಿಸಲಾಗಿತ್ತು. ಎಲ್ಲಾ ಸಮಿತಿಗಳಿಗೂ ನೀಡಲಾಗಿರುವ ಸಂಖ್ಯೆಗನುಗುಣವಾಗಿ ಬಸವೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಹೊತ್ತ ವಾಹನದ ಹಿಂದೆ ಸಂಖ್ಯೆಗನುಗುಣವಾಗಿ ಉಳಿದ ಉತ್ಸವಮೂರ್ತಿಗಳ ಶೋಭಾಯಾತ್ರೆ ಸಾಗಿಬಂತು.
ಪೊಲೀಸ್ ಕಣ್ಗಾವಲು :: ಗೌರಿ ಗಣೇಶ ವಿಸರ್ಜನೋತ್ಸವ ಮತ್ತು ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿಂದ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರವಹಿಸುವ ಸಲುವಾಗಿ ಪೊಲೀಸ್ ಕಣ್ಗಾವಲಿರಿಸಿದರು. ಮಂಟಪಗಳು ತೆರಳುವ ಸ್ಥಳದಿಂದ ಸಾಗುವ ಮಾರ್ಗದಲ್ಲೂ ನಿಗದಿತ ಪೊಲೀಸರನ್ನು ನೇಮಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಮಾಹಿತಿಯನ್ನು ಪಡೆದುಕೊಳ್ಳುತ್ತಾ ಪಟ್ಟಣದಲ್ಲಿ ಸಂಚಾರ ನಡೆಸಿದರು. ವಿರಾಜಪೇಟೆ ಶಾಸಕ ಪೊನ್ನಣ್ಣ ಎಲ್ಲಾ ಸಮಿತಿಗಳಿಗೆ ಭೇಟಿ ನೀಡಿದರು. ಇದಕ್ಕಾಗಿ ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಯಿಂದ ಕರ್ತವ್ಯಕ್ಕಾಗಿ ಪೋಲಿಸರನ್ನು ನಿಯೋಜಿಸಲಾಗಿದ್ದು ಡಿವೈಎಸ್‍ಪಿ-3, ಸರ್ಕಲ್‍ಇನ್ಸ್‍ಪೆಕ್ಟರ್ 12, ಸಬ್‍ಇನ್ಸ್‍ಪೆಕ್ಟರ್ 31, ಎಎಸ್‍ಐ 54, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್‍ಟೇಬಲ್ 357, ಮಹಿಳಾ ಸಿಬ್ಬಂದಿಗಳು 62, ಕೆಎಸ್‍ಆರ್‍ಪಿ 1, ಡಿಆರ್ 1, ಹೋಮ್‍ಗಾರ್ಡ್ 65, ಅಗ್ನಿ ಶಾಮಕದಳ ನಿಯೋಜಿಸಲಾಗಿತ್ತು. ಗಣೇಶೋತ್ಸವದ ಅಂಗವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿತ್ತು. ಮಧ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಗೌರಿ ಗಣೇಶ ವಿಸರ್ಜನೆಗಾಗಿ ಉತ್ಸವ ಸಮಿತಿ ಸದಸ್ಯರು ಉತ್ಸಾಹದಿಂದ ಸೋನೆ ಮಳೆಯ ನಡುವೆಯು ಶ್ರಮವಹಿಸಿದ್ದು ಕಂಡು ಬಂತು. ಪುರಸಭೆಯಿಂದ ಸುಗಮ ಸಂಚಾರಕ್ಕೆ ರಸ್ತೆಯ ಗುಂಡಿಗಳನ್ನು ಮುಚ್ಚಿ ರಸ್ತೆ ಬದಿಯಲ್ಲಿ ಸ್ವಚ್ಚಗೊಳಿಸಲಾಗಿತ್ತು. ಚೆಸ್ಕಾಂ ಇಲಾಖೆಯಿಂದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಗಳ ಬಗ್ಗೆ ನಿಗಾವಹಿಸಿದ್ದರು.