ಮಡಿಕೇರಿ ಸೆ.25 NEWS DESK : ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿ ಸದಸ್ಯರಾದ ರಂಗಸ್ವಾಮಿ ಅವರು ಸಫಾಯಿ ಕರ್ಮಚಾರಿಗಳು ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ಮಿಕ ಇಲಾಖೆಯ ನಿಯಮದಂತೆ ವೇತನ ನೀಡುವಂತಾಗಬೇಕು. ಜೊತೆಗೆ ಪಿಎಫ್, ಇಎಸ್‍ಐ ಸೌಲಭ್ಯ ಒದಗಿಸುವಂತಾಗಬೇಕು ಎಂದು ಕೋರಿದರು. ಸುಂಟಿಕೊಪ್ಪ ಗ್ರಾ.ಪಂ.ವ್ಯಾಪ್ತಿಯ ಉಲುಗುಲಿ ಗ್ರಾಮದಲ್ಲಿ ಸುಮಾರು 12 ಕುಟುಂಬಗಳು ವಾಸಮಾಡುತ್ತಿದ್ದು, ಈ ಕುಟುಂಬಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕಿದೆ ಎಂದು ಕೋರಿದರು. ಸಿದ್ದಾಪುರ ಗ್ರಾಮವು ಅಮ್ಮತ್ತಿ ಹೋಬಳಿ ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸ್ಥಳೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಸಭೆ ಸಮಾರಂಭಗಳನ್ನು ನಡೆಸಲು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಲು ಜಾಗ ಗುರುತಿಸಲು ಸೂಚಿಸಿದ ಮೇರೆ ಪರಿಶೀಲಿಸಲಾಗಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮಂಜೂರಾತಿಗೆ ಪೈಸಾರಿ ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುವಂತಾಗಬೇಕು ಎಂದು ರಂಗಸ್ವಾಮಿ ಕೋರಿದರು. ಸುಂಟಿಕೊಪ್ಪ ಹೋಬಳಿ ಉಲುಗುಲಿ ಗ್ರಾಮದ ಸ.ನಂ. 164/1 ರ 0.02 ಎಕರೆ, ಅತ್ತೂರು ನಲ್ಲೂರು ಗ್ರಾಮದಲ್ಲಿ 05 ಎಕರೆ ಭೂಮಿ, ಏಳನೇ ಹೊಸಕೋಟೆ ಗ್ರಾಮದಲ್ಲಿ 0.05 ಎಕರೆ ಜಾಗವನ್ನು ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಭವನದ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ ಎಂದು ತಹಶೀಲ್ದಾರರು ವರದಿ ನೀಡಿದ್ದಾರೆ ಎಂದು ಶೇಖರ್ ಮಾಹಿತಿ ನೀಡಿದರು.