ಪೊನ್ನಂಪೇಟೆ ಸೆ.26 NEWS DESK : ಇಸ್ಲಾಮಿನ ಇತಿಹಾಸದಲ್ಲಿ ಆದರ್ಶ ಧೀರರಾಗಿರುವ ವಿಶ್ವ ಪ್ರವಾದಿ ಪ್ರವಾದಿ ಮುಹಮ್ಮದ್ ರ ಜೀವನವು ಒಂದು ತೆರೆದ ಪುಸ್ತಕವಾಗಿದೆ. ತಮ್ಮ ಖಾಸಗಿ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಾಮಾಜಿಕ ಜೀವನವನ್ನು ಮಾದರಿಯಾಗಿ ಹಾಗೂ ಸಮುದಾಯವನ್ನು ಕಲ್ಯಾಣಕಾರಿಯನ್ನಾಗಿ ರೂಪಿಸಿದ ಪ್ರವಾದಿಯವರು ಜನಕೋಟಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಹೇಳಿದರು. ದುಬೈನ ಅನಿವಾಸಿ ಕೊಡಗಿನ ಕನ್ನಡಿಗರ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯು.ಎ.ಇ. ರಾಷ್ಟ್ರೀಯ ಸಮಿತಿ ವತಿಯಿಂದ ದುಬೈನ ದೇರಾದಲ್ಲಿ ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಅಂಗವಾಗಿ ‘ವಿಶ್ವ ವಿಮೋಚನೆಯ ಹಾದಿ -ಪ್ರವಾದಿ’ ಎಂಬ ಧ್ಯೇಯವಾಕ್ಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮಿಲಾದ್ ಸಮಾವೇಶ-2024 ರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾದಿತ್ವ ಲಭಿಸಿದ 23 ವರ್ಷಗಳಲ್ಲಿ ಇಸ್ಲಾಂ ಎಂಬ ಜೀವನಪದ್ಧತಿಯನ್ನು 12ಲಕ್ಷ ಚದರ ಮೈಲಿ ವಿಸ್ತೀರ್ಣದ ಭೂಪ್ರದೇಶದಲ್ಲಿ ವಿಸ್ತರಿಸಿದ ಯಶಸ್ವಿ ಮಹಾ ನಾಯಕರಾದ ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಈ ಲೋಕದಲ್ಲಿ ಯಾವುದೇ ಸ್ಮಾರಕಗಳಾಗಲಿ, ಅವರ ಚಿತ್ರಗಳಾಗಲಿ, ಪ್ರತಿಮೆಗಳಾಗಲಿ ಎಲ್ಲಿಯೂ ಕಾಣುವುದಿಲ್ಲ. ಆದರೂ ಅವರಷ್ಟು ಆರಾಧಿಸಲ್ಪಡುವ ಮತ್ತು ಗೌರವಿಸಲ್ಪಡುವ ಆದರ್ಶಪುರುಷರು ಮತ್ತೊಬ್ಬರಿಲ್ಲ ಎಂದು ಅಭಿಪ್ರಾಯಪಟ್ಟರು. ಜಗತ್ತಿನಾದ್ಯಂತ ಇರುವ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರೊಂದಿಗೆ ಹೊಂದಿರುವ ಬಿಡಿಸಲಾರದ ಸಂಬಂಧ ಸಂಪೂರ್ಣ ವಿಭಿನ್ನವಾಗಿದೆ. ಕಳೆದ 14 ಶತಮಾನಗಳಿಂದ ಕೋಟ್ಯಾಂತರ ವಿಶ್ವಾಸಿಗಳು ತಮ್ಮ ಬದುಕಿನುದ್ಧಕ್ಕೂ ಪ್ರವಾದಿಯವರ ಜೀವನಕ್ರಮವನ್ನು ಅನುಸರಿಸುತ್ತಾ ಬರುತ್ತಿರುವುದು ಸಾಮಾನ್ಯ ವಿಚಾರವಲ್ಲ. ಪ್ರವಾದಿ ಮುಹಮ್ಮದರು ಇತಿಹಾಸದಲ್ಲಿ ಮಾನವ ಜೀವನದ ಸಕಲ ರಂಗಗಳಲ್ಲಿ ಸಮಗ್ರ ಕ್ರಾಂತಿಯನ್ನುಂಟು ಮಾಡಿದ ಏಕೈಕ ವ್ಯಕ್ತಿಯಾಗಿದ್ದಾರೆ. ಅಂದಿನ ಕಾಲಘಟ್ಟದಲ್ಲಿ ಪ್ರವಾದಿಯವರು ಕಟ್ಟಿ ಬೆಳೆಸಿದ ಸಮಾಜಕ್ಕಿಂತ ಆದರ್ಶಪ್ರಾಯವಾದ ಮತ್ತೊಂದು ಸಮಾಜ ಅದಕ್ಕಿಂತ ಮುಂಚೆಯಾಗಲಿ ಅಥವಾ ನಂತರವಾಗಲಿ ಈ ಲೋಕದಲ್ಲಿ ತಲೆಯೆತ್ತಲಿಲ್ಲ ಎಂದು ಎಂದು ಸೂಫಿ ಹಾಜಿ ವಿಶ್ಲೇಷಿಸಿದರು. ಕೊಡಗು ಜಿಲ್ಲೆಯಲ್ಲಿ ನಿರಂತರವಾದ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮೂಲಕ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪ್ರತಿ ವರ್ಷ ದುಬೈ ಮಣ್ಣಿನಲ್ಲಿ ಪ್ರವಾದಿಯವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಉದ್ಯೋಗ ಮತ್ತು ವ್ಯವಹಾರದ ಮೂಲಕ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಬಂದು ಕಷ್ಟಪಟ್ಟು ದುಡಿದ ಆದಾಯದ ಒಂದು ಪಾಲನ್ನು ತಮ್ಮ ತಾಯಿನಾಡಿನ ಉನ್ನತಿಗಾಗಿ ಬಳಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸೂಫಿ ಹಾಜಿ, ಅನಾಥ ಮತ್ತು ಬಡ ಹೆಣ್ಣು ಮಕ್ಕಳ ಮದುವೆ, ಕಡು ಬಡವರಿಗೆ ಮನೆ ನಿರ್ಮಾಣ, ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವು, ಅಸಹಾಯಕರಿಗೆ ಸಹಾಯಧನ ವಿತರಣೆ ಮೊದಲಾದ ಸಾಮಾಜಿಕ ಸೇವೆಗಳ ಮೂಲಕ ಜನರಿಗೆ ಹತ್ತಿರವಾಗಿರುವ ಈ ಸಂಘಟನೆ, ಇಡೀ ಕೊಡಗು ಜಿಲ್ಲೆಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಸಮಾವೇಶದ ಸಾನಿಧ್ಯ ವಹಿಸಿದ ಹಿರಿಯ ಧಾರ್ಮಿಕ ವಿದ್ವಾಂಸರಾದ ಸೈಯದ್ ಖಲೀಲ್ ಇಬ್ರಾಹಿಂ ಬುಖಾರಿ ತಂಗಳ್ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿದ್ದ ಹಂಝ ಮಿಸ್ಬಾಯ್ ಉಸ್ತಾದ್, ಪ್ರವಾದಿ ಮುಹಮ್ಮದರ ಆದರ್ಶ ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ ಜಿಸಿಸಿ ಅಧ್ಯಕ್ಷರು ಮತ್ತು ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹೆಚ್. ಎ. ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ದುಬೈನ ಉದ್ಯಮಿ ಅಶ್ರಫ್ ಎಮ್ಮೆಮಾಡು ಸಮಾವೇಶದಲ್ಲಿ ಮಾತನಾಡಿದರು. ಇದಕ್ಕೂ ಮೊದಲು ವಿದ್ವಾಂಸರಾದ ಜಲೀಲ್ ನಿಜಾಮಿ ಎಮ್ಮೆಮಾಡು ಸಮಾವೇಶವನ್ನು ಉದ್ಘಾಟಿಸಿದರು. ದುಬೈ ಮಿಲಾದ್ ಸಮಾವೇಶದ ಅಂಗವಾಗಿ ಕೊಡಗಿನ ಅನಿವಾಸಿ ಕನ್ನಡಿಗರಿಗೆ ಮತ್ತು ಅವರ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಸುನ್ನಿ ಸಂಘಟನೆಗಳ ಪ್ರಮುಖರಾದ ಶಾಫಿ ಸಖಾಫಿ ಕೊಂಡಂಗೇರಿ, ರಫೀಕ್ ಹಾಜಿ ಚಾಮಿಯಾಲ, ಇಬ್ರಾಹಿಂ ನಾಪೋಕ್ಲು, ಮುಜಮ್ಮಿಲ್ ಪಾಲಿಬೆಟ್ಟ, ಝಮೀರ್ ಬೆಂಗಳೂರು, ಕೆ.ಎಸ್. ಡಬ್ಲ್ಯೂ. ಎ. ಪದಾಧಿಕಾರಿಗಳಾದ ಜುಬೈರ್ ಎಮ್ಮೆಮಾಡು, ಮುಜೀಬ್ ಕಡಂಗ, ನಿಸಾರ್ ಗುಂಡಿಕೆರೆ, ನಯಾಜ್ ನಾಪೋಕ್ಲು, ಅಶ್ರಫ್ ಕುಂಜಿಲ ಮೊದಲಾದವರು ಉಪಸ್ಥಿತರಿದ್ದರು. ಶಫೀಕ್ ಹಿಷಾಮಿ ಎಮ್ಮೆಮಾಡು ಸ್ವಾಗತಿಸಿದರು. ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಸರ್ ನಹೀಮಿ ಹಾಗು ರಿಯಾಜ್ ಕೊಂಡಂಗೇರಿ ಕಾರ್ಯಕ್ರಮ ನಿರೂಪಿಸಿದರು. ಜುಬೈರ್ ಎಮ್ಮೆಮಾಡು ವಂದಿಸಿದರು.
ವರದಿ: ರಫೀಕ್ ತೂಚಮಕೇರಿ