ಮಡಿಕೇರಿ NEWS DESK ಸೆ.26 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕೊಡಗು ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ 17 ಅಧಿಕ ತಂತ್ರಾಂಶಗಳ ಮೊಬೈಲ್, ಲ್ಯಾಪ್ ಟಾಪ್, ಇಂಟರ್ನೆಟ್ ಹಾಗೂ ಕಾರ್ಯನಿರ್ವಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಇವುಗಳನ್ನು ಸಮರ್ಪಕವಾಗಿ ನೀಡದೆ ಕರ್ತವ್ಯದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಲಭೂತ ಸೌಲಭ್ಯಗಳನ್ನು ನೀಡಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸರ್ಕಾರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರಮುಖರು ತಿಳಿಸಿದರು.
::: ಗ್ರಾಮ ಸಹಾಯಕರ ಬೇಡಿಕೆಗಳು ::: ಗ್ರಾಮ ಸಹಾಯಕರಿಗೆ ರೂ.27,000 ಕನಿಷ್ಠ ವೇತನ ನೀಡಬೇಕು, ವರ್ಕ್ಚಾರ್ಟ್ ನಿಗಧಿಪಡಿಸಬೇಕು, ನಿವೃತ್ತಿ ಹೊಂದಿದ, ಹೊಂದುತ್ತಿರುವ ಗ್ರಾಮ ಸಹಕಾಯಕರಿಗೆ ರೂ.10 ಲಕ್ಷ ಇಡಿಗಂಟು ಹಾಗೂ 15 ಸಾವಿರ ನಿವೃತ್ತಿ ವೇತನ ನೀಡಬೇಕು, ಇಎಸ್, ಪಿಎಫ್ ಹಾಗೂ ಭವಿಷ್ಯ ನಿಧಿ ಸೌಲಭ್ಯ ನೀಡಬೇಕು, ಮಹಿಳಾ ಗ್ರಾಮ ಸಹಾಯಕರಿಗೆ ಹೆರಿಗೆ ರಜೆ ನೀಡಬೇಕು, ಚುನಾವಣೆ ಭತ್ಯೆ ನೀಡಬೇಕು, ಎನ್‌ಪಿಎಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಅಕ್ಷತಾ ಬಿ.ಶೆಟ್ಟಿ, ಉಪಾಧ್ಯಕ್ಷ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಾಟೀಲ್, ಗೌರವಾಧ್ಯಕ್ಷ ಗೋಪಿನಾಥ್, ಖಜಾಂಚಿ ರವಿಚಂದ್ರ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಸಂದೀಪ್ ಶೆಣೈ, ವಿರಾಜಪೇಟೆ ಕೃಷ್ಣ, ಪೊನ್ನಂಪೇಟೆ ನಿತಿನ್, ಕುಶಾಲನಗರ ಗುರು ದರ್ಶನ್, ಸೋಮವಾರಪೇಟೆ ಸಂತೋಷ್, ಕೊಡಗು ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಜನಾರ್ಧನ, ತಾಲ್ಲೂಕು ಅಧ್ಯಕ್ಷ ಪ್ರಸಾದ್ ಪೂಜಾರಿ, ಲೋಕೇಶ್, ನಾಗರಾಜ್, ಸುರೇಶ್, ಜನಾರ್ಧನ ಸೇರಿದಂತೆ ಆಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.