ಮಡಿಕೇರಿ ಸೆ.27 NEWS DESK : ಜಿಲ್ಲೆಯಲ್ಲಿ ಸೆ.29 ರಂದು ನಡೆಯುವ ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಯ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು (ಕಡ್ಡಾಯ ಕನ್ನಡ) ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ನಿರ್ದೇಶನ ನೀಡಿದರು. ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಓದಿಕೊಂಡು ಪರೀಕ್ಷೆಯನ್ನು ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಮಾತನಾಡಿ, ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪದವಿ ಪೂರ್ವ ಕಾಲೇಜು, ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಹಾಗೆಯೇ ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಈ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 2,772 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಮಾರ್ಗಾಧಿಕಾರಿಗಳು, ಜಾಗೃತ ದಳದ ಸಿಬ್ಬಂದಿಗಳು, ವೀಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ನಿಯೋಜಿಸಲಾಗಿದೆ. ಹಾಗೆಯೇ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕಿದೆ ಎಂದು ಮನವಿ ಮಾಡಿದರು. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಇರಲಿದೆ. ಪರೀಕ್ಷೆ ನಡೆಸುವಲ್ಲಿ ಮೇಲ್ವಿಚಾರಕರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ಮದೆ ಮಹೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಅವರು ಪರೀಕ್ಷೆ ಸಂಬಂಧ ಮಾಹಿತಿ ನೀಡಿದರು. ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಘವ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಪರೀಕ್ಷಾ ಮೇಲ್ವಿಚಾರಕರು ಇತರರು ಇದ್ದರು.