ಮಡಿಕೇರಿ NEWS DESK ಸೆ.27 : ರೋಟರಿ ಕ್ಲಬ್ ಮಡಿಕೇರಿ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ರೋಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ ನಡೆಯಿತು. ಪಿಡಿಜಿ ರೋಟರಿಯನ್ ಎಂ.ಸುರೇಶ್ ಚಂಗಪ್ಪ ಪದಗ್ರಹಣ ಅಧಿಕಾರಿಯಾಗಿ ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರುಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ಮಾತನಾಡಿದ ಅವರು ಇಂದಿನ ಯುವ ಪೀಳಿಗೆಗೆ ತಂತ್ರಜ್ಞಾನ ಹೆಚ್ಚು ಅನುಕೂಲಕರವಾಗಿದೆ. ಮುಂದುವರಿದ ಕಾಲಘಟ್ಟದಲ್ಲಿ ನವೀನ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಜಾತಿ, ಧರ್ಮ ಎಲ್ಲವನ್ನೂ ಮೀರಿ ಮನುಷ್ಯತ್ವವನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಮ್ಮ ಜಗತ್ತಿನಲ್ಲಿ ಬಂದೊದಗಿದೆ. ತಾವು ರೋಟರಿ ಸಂಸ್ಥೆಯ ಭಾಗವಾಗಿ ಭಾತೃತ್ವವನ್ನು ನಮ್ಮ ಪರಿಸರದಲ್ಲಿ ಗಟ್ಟಿಯಾಗಿ ಬೇರೂರುವಂತೆ ಕೆಲಸ ಮಾಡಬೇಕೆಂದು ನೂತನ ಪದಾಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ರೋಟರಿ ಕ್ಲಬ್‌ನ ಅಧ್ಯಕ್ಷ ಎಂ.ಸುದಯ್ ನಾಣಯ್ಯ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿ ವಿದ್ಯಾರ್ಥಿಗಳು ರೋಟರ‍್ಯಾಕ್ಟ್ ಕ್ಲಬ್ ಗೆ ನೀಡಲಾಗುವ ಪ್ರಶಸ್ತಿಗೆ ಭಾಜನರಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು ರೂಪಿಸಿ ಅನುಷ್ಠಾನ ಮಾಡಬೇಕೆಂದು ತಿಳಿಸಿದರು. ಕಾಲೇಜ್ ನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ ಅವರು ಮಾತನಾಡಿ, ರೋಟರಿ ಸಂಸ್ಥೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ರೋಟರಿ ಸಂಸ್ಥೆಯ ಭಾಗವಾಗಿ ತಮ್ಮ ಜೀವನದಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಬಿ.ಸುಫಾನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹೆಚ್.ಕೆ.ಜೀವನ್ ಅಧಿಕಾರ ಸ್ವೀಕರಿಸಿದರು. ಮಡಿಕೇರಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ರೋಟರಿಯನ್ ಪ್ರಿನ್ಸ್ ಪೊನ್ನಣ್ಣ, ಯೂತ್ ಸರ್ವಿಸ್ ನಿರ್ದೇಶಕ ರೋಟರಿಯನ್ ಕೆ.ಸಿ.ಕಾರ್ಯಪ್ಪ, ರೋರ‍್ಯಾಕ್ಟ್ ಕ್ಲಬ್‌ನ ಸಂಚಾಲಕ ಸುಪ್ರಿಯ, ರೋಟರಿಯನ್ ಚೀಯಣ್ಣ, ಪಾರ್ವತಿ, ಮಲ್ಲಿಗೆ ಪೈ, ಲಲಿತಾ ರಾಘವನ್ ಉಪಸ್ಥಿತರಿದ್ದರು.