ಮಡಿಕೇರಿ ಸೆ.28 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇಂಗಾ ಹೆಲ್ತ್ ಪೌಂಡೇಶನ್ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಡಿ ಇಂಗಾ ಹೆಲ್ತ್ ಪೌಂಡೇಶನ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪಗಳ ತಪಾಸಣಾ ಶಿಬಿರ’ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸತೀಶ್ ಕುಮಾರ್ ಕೆ.ಎಂ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಇಂಗಾ ಹೆಲ್ತ್ ಪೌಂಡೇಶನ್, ಇವರೊಂದಿಗೆ “ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪಗಳ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆಗೆ ಜಿಲ್ಲೆಯನ್ನು ರಾಜ್ಯ ಮಟ್ಟದಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಶಿಬಿರದಲ್ಲಿ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಗುವ ಮಕ್ಕಳಿಗೆ ಇಂಗಾ ಹೆಲ್ತ್ ಪೌಂಡೇಶನ್, ಬೆಂಗಳೂರು, ಇವರಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಧುಸೂಧನ್ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿಗಳಲ್ಲಿ ಆರ್‍ಬಿಎಸ್‍ಕೆ ತಂಡದ ವತಿಯಿಂದ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಈ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಗುರುತಿಸಲಾಗಿರುವ ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪ ಇರುವ ಮಕ್ಕಳಿಗೆ ಇಂಗಾ ಹೆಲ್ತ್ ಪೌಂಡೇಶನ್ ವತಿಯಿಂದ ಈ ಶಿಬಿರದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಸಂಸ್ಥೆಯು ಪ್ರತೀ ವರ್ಷವೂ ಗುರುತಿಸಲಾಗಿರುವ ಮಕ್ಕಳಿಗೆ ಜಿಲ್ಲೆಯಲ್ಲಿ ಶಿಬಿರವನ್ನು ಏರ್ಪಡಿಸಿ ಶಸ್ತ್ರ ಚಿಕಿತ್ಸೆಗೆ ಅವಶ್ಯಕತೆಯಿರುವ ಮಕ್ಕಳನ್ನು ಇಂಗಾ ಹೆಲ್ತ್ ಪೌಂಡೇಶನ್, ಬೆಂಗಳೂರಿಗೆ ಶಿಫಾರಸು ಮಾಡಿ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಫಾಲೋ-ಅಪ್ ಅನ್ನು ಸಹ ಸದರಿ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು ಒಂದು ವೇಳೆ ತಮ್ಮ ಮಕ್ಕಳು ಈ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಅಂಗನವಾಡಿ/ ಶಾಲೆಯಲ್ಲಿ ತಮ್ಮ ಹೆಸರು ನೋಂದಾಯಿಸುವುದು ಅಥವಾ ಆರ್‍ಬಿಎಸ್‍ಕೆ ವೈದ್ಯರಿಗೆ ಮಾಹಿತಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳುವುದರ ಮೂಲಕ ಶಿಬಿರದಲ್ಲಿ ಭಾಗವಹಿಸಿ ಉಚಿತ ಶಸ್ತ್ರ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಲು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಡಿ.ಇ.ಐ.ಸಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ ಎಂದರು. ಶಿಬಿರದಲ್ಲಿ ಸೀಳು ತುಟಿ-2, ಸೀಳು ಅಂಗುಳ- 5, ಸೀಳು ತುಟಿ ಮತ್ತು ಸೀಳು ಅಂಗುಳ- 4, ಕ್ರೋನಿಯೋಫೇಷಿಯಲ್ ವಿರೂಪ- 3, ಒಟ್ಟು 14 ಫಲಾನುಭವಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇವರಲ್ಲಿ 4 ಫಲಾನುಭವಿಗಳನ್ನು ಶಸ್ತ್ರ ಚಿಕಿತ್ಸೆಗೆ ರೆಫರ್ ಮಾಡಲಾಗಿದ್ದು, 3 ಮಕ್ಕಳನ್ನು 8 ವಯಸ್ಸಿನ ನಂತರ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹಾಗೂ 7 ಮಕ್ಕಳಿಗೆ ಈ ಹಿಂದೆ ಶಸ್ತ್ರ ಚಿಕಿತ್ಸೆ ಆಗಿದ್ದು, ಫಾಲೋ-ಅಪ್ ಮಾಡಲಾಗಿರುತ್ತದೆ ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಮಾಹಿತಿ ನೀಡಿದರು. ಕ್ರೋನಿಯೋಫೇಷಿಯಲ್ ಸರ್ಜನ್ ಡಾ.ಲೋಹಿತಾ, ಆರ್‍ಬಿಎಸ್‍ಕೆ ತಂಡದ ವೈದ್ಯರು ಇತರರು ಇದ್ದರು.