ಸುಂಟಿಕೊಪ್ಪ ಅ.2 NEWS DESK : ಶಿಸ್ತು, ಸಂಯಮ ತಾಳ್ಮೆಯನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ವ್ಯಕ್ತಿಯು ಉತ್ತಮವಾಗಿ ಬೆಳೆಯಲು ಸಾಧ್ಯವೆಂದು ಸುಂಟಿಕೊಪ್ಪ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ 3ನೇ ದಿನದ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ತಾಳ್ಮೆ ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧ್ಯವೆಂದು ಹೇಳಿದರು. ಸೋಮವಾರಪೇಟೆ ಪುಷ್ಪಗಿರಿ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಬಿ.ಜಿ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶಾಲೆಯಲ್ಲಿ ಕಲಿಯುವುದು ಮಾತ್ರವಲ್ಲದೆ. ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯ ಪರಿವರ್ತಿತ ರೀತಿಯೇ ರಾಷ್ಟ್ರೀಯ ಸೆವಾ ಯೋಜನೆಯಾಗಿದ್ದು ಇಲ್ಲಿ ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಸಾಮೂಹಿಕ ಜೀವನ ಶಿಕ್ಷಣದಿಂದ ಕಲಿತುಕೊಳ್ಳಬಹುದಾಗಿದೆ. ಇಂತಹ ಅವಶ್ಯಕತೆಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಕ್ಲಸ್ಟರ್ ಸಿಆರ್‍ಪಿ ಎಂ.ಸಿ.ಸೀಮಾ ಮಾತನಾಡಿ, ಎನ್‍ಎಸ್‍ಎಸ್ ಶಿಬಿರವೇ ಒಂದು ವ್ಯಕ್ತಿತ್ವ ವಿಕಾಸನ ಶಿಬಿರವಾಗಿದ್ದು, ಮನೆಯನ್ನು ಬಿಟ್ಟು ಹೊರಗಿನವರೊಂದಿಗೆ ಅಪರಿಚಿತ ಪ್ರದೇಶದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಎಲ್ಲಾರೊಂದಿಗೆ ಬೇರೆಯುವುದು ಅಷ್ಟು ಸುಲಭವಲ್ಲ ಇದಕ್ಕೆ ಪೂರ್ವ ಸಿದ್ದತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಕಾಗುತ್ತದೆ. ಎನ್‍ಎಸ್‍ಎಸ್ ಶಿಬಿರದಲ್ಲಿ ನಾವು ಕಲಿತುಕೊಂಡ ವಿಷಯಗಳು ಮತ್ತು ಕೆಲಸಗಳು ಮುಂದೆ ನಾವು ಸ್ವತಂತ್ರವಾಗಿ ಬದುಕುವಾಗ ನೆರವಿಗೆ ಬರುತ್ತದೆ ಎಂದು ಸೀಮಾ ವಿಶ್ಲೇಷಿದರು. ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ನಾವು ಬಳಸುವ ಮಾತು, ಇತರರಿಗೆ ನೀಡುವ ಗೌರವ ಹಾಗೂ ಇತರರೊಂದಿಗಿನ ಒಡನಾಟ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರುಗಳಾದ ಜಿನಾಸುದ್ಧೀನ್, ಶಬ್ಬೀರ್, ಆಲಿಕುಟ್ಟಿ ಹಾಗೂ ಮಂಜುನಾಥ್ ಹಾಜರಿದ್ದರು.