ಕುಶಾಲನಗರ NEWS DESK ಅ.2 : ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ನನಸಾಗಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್ ಕರೆ ನೀಡಿದ್ದಾರೆ. ಕುಶಾಲನಗರ ಮೂಕಾಂಬಿಕಾ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಡ್ಡೆ ಹೊಸೂರು ವಲಯ ಮತ್ತು ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರು ಸಮಾಜದಲ್ಲಿ ಇತರರಿಗೆ ಮಾರ್ಗದರ್ಶನ ನೀಡುವಂತಹ ಪ್ರಜೆಗಳಾಗಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸೂದನ ಗೋಪಾಲ್ ಅವರು ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ನಿರಂತರ ಚಟುವಟಿಕೆಗಳು ಕಾರ್ಯಕ್ರಮಗಳ ಮೂಲಕ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ ಎಂದರು. ಈ ಸಂದರ್ಭ ಗುಡ್ಡೆ ಹೊಸೂರು ವಲಯದ ಮೇಲ್ವಿಚಾರಕರಾದ ಸತೀಶ್, ಮುಳ್ಳುಸೋಗೆ ವ್ಯಾಪ್ತಿಯ ಒಕ್ಕೂಟದ ಅಧ್ಯಕ್ಷರಾದ ವನಿತ, ಸೇವಾ ಪ್ರತಿನಿಧಿಗಳಾದ ಸುವರ್ಣ, ಶಶಿಕಲಾ ಮತ್ತು ಪ್ರೌಢಶಾಲೆ ಹಾಗೂ ಕಾಲೇಜು ಬೋಧಕರಾದ ಕಾಂತರಾಜು, ಚಂದ್ರಶೇಖರ್, ಹೇಮಂತ್ ಕುಮಾರ್, ಡಿ.ಕೆ.ಸುರೇಶ್, ನಗಿನ ಬಾನು, ಸ್ಮಿತಾ ಡಿಸೋಜಾ, ಧನಲಕ್ಷ್ಮಿ ಮತ್ತಿತರರು ಇದ್ದರು.