


ಮಡಿಕೇರಿ NEWS DESK ಅ.2 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದಲ್ಲಿ ನಡೆದ ಅಂಗನವಾಡಿ ದಿನಾಚರಣೆಯಲ್ಲಿ ಮಡಿಕೇರಿ ತಾಲ್ಲೂಕು ಮಟ್ಟದ ಉತ್ತಮ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶುಭ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಾಡಗ-1 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಿ.ಬಿ.ಜಯಂತಿ, ಕರಡ ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಕೆ.ಪಿ ತಾಲ್ಲೂಕು ಮಟ್ಟದ ಉತ್ತಮ ಕಾರ್ಯಕರ್ತೆ ಪ್ರಶಸ್ತಿ ಹಾಗೂ ಕೆ.ಬಾಡಗ ಅಂಗನವಾಡಿ ಕೇಂದ್ರದ ಸಹಾಯಕಿ ಎನ್.ಜಿ.ಸಾವಿತ್ರಿ, ಹಳೇ ತಾಲ್ಲೂಕು ಅಂಗನವಾಡಿಯ ಮಮತಾ ಸಿ.ಎಲ್ ಉತ್ತಮ ಸಹಾಯಕಿ ಪ್ರಶಸ್ತಿಯನ್ನು ಪಡೆದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಮತ್ತು ಯೋಜನೆಯ ಚಟುವಟಿಕೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಇವರುಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು ಅವರು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಸ್.ಸೀತಾಲಕ್ಷ್ಮಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್, ಹಾಗೂ ಶೀಲಾ ಉಪಸ್ಥಿತರಿದ್ದರು.