ಮಡಿಕೇರಿ ಅ.5 NEWS DESK : ತಾವೊಬ್ಬ ಪರಿಶುದ್ಧ ರಾಜಕಾರಣಿ ಎಂದು ಹೇಳಿಕೊಂಡೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆತ್ಮಸಾಕ್ಷಿ ಇದ್ದರೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನದ ಸಹ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳು ನಡೆಯುತ್ತಿವೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ, ಎಸ್‍ಸಿ, ಎಸ್‍ಟಿ ಅನುದಾನ ದುರ್ಬಳಕೆ ಸೇರಿದಂತೆ ಮುಡಾ ಹಗರಣವೂ ಬೆಳಕಿಗೆ ಬಂದಿದೆ. ಅಧಿವೇಶನದಲ್ಲಿ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಸಿಎಂ ಪಲಾಯನವಾದ ಮಂಡಿಸಿದ್ದಾರೆ. ತಾವೊಬ್ಬ ಪರಿಶುದ್ಧ ರಾಜಕಾರಣಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರು ಕಳೆದ 40 ವರ್ಷಗಳಿಂದ ಮುಖವಾಡದ ರಾಜಕಾರಣ ಮಾಡಿದ್ದಾರೆ ಎನ್ನುವುದು ಇದೀಗ ಸಾಬೀತಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಲ್ಲಿಯವರೆಗೆ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದರು.
::: 10 ಕೋಟಿ ಸದಸ್ಯರು :::
ಭಾರತೀಯ ಜನತಾ ಪಾರ್ಟಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಬೃಹತ್ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ದೇಶವ್ಯಾಪಿ 10 ಕೋಟಿ ಸದಸ್ಯರ ಗುರಿ ಹೊಂದಿದೆ. ಮೊದಲ ಹಂತದಲ್ಲಿ 8 ಕೋಟಿ ಸದಸ್ಯರನ್ನು ಹೊಂದಲಾಗಿದ್ದು, ಕರ್ನಾಟಕದಲ್ಲಿ 1.25 ಕೋಟಿ ಗುರಿಯಲ್ಲಿ 40 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ 70 ಸಾವಿರ ಗುರಿಯಲ್ಲಿ 30 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಎರಡನೇ ಹಂತದ ಅಭಿಯಾನ ಅ.2 ರಿಂದ ಆರಂಭಗೊಂಡಿದ್ದು, 15ಕ್ಕೆ ಅಂತಿಮಗೊಳ್ಳಲಿದೆ. ಈ ಅವಧಿಯಲ್ಲಿ ನಿಗಧಿತ ಗುರಿ ಸಾಧಿಸಲಾಗುವುದು ಎಂದು ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.